ಮೈಸೂರು: ಸೆಕ್ಯೂರಿಟಿ ಇಲ್ಲದ ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್ ಬಳಸಿ ಹಣ ದೋಚುವ ವ್ಯವಸ್ಥಿತ ಜಾಲ ನಗರದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಶಾರದಾದೇವಿ ನಗರದ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಈ ರೀತಿ ಹಣ ದೋಚುವ ಸ್ಕಿಮ್ಮರ್ ಯಂತ್ರ ದೊರಕಿರುವುದು ಜನರಲ್ಲಿ ಅತಂಕ ಮೂಡಿಸಿದೆ.
ನಿವೃತ್ತ ಶಿಕ್ಷಕರೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದು, ಈ ವೇಳೆ ಅವರಿಗೆ ಸ್ಕಿಮ್ಮರ್ ಯಂತ್ರ ದೊರೆತಿದ್ದು, ಅದನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ:
ಶಾರದಾದೇವಿ ನಗರದ ವೃತ್ತದಲ್ಲಿರುವ ಎಟಿಎಂನಲ್ಲಿ ನಿವೃತ್ತ ಶಿಕ್ಷಕರೊಬ್ಬರು ಹಣ ಪಡೆಯಲು ಹೋಗಿದ್ದಾರೆ. ಅನುಮಾನದ ಮೇಲೆ ಎಟಿಎಂ ಹಾಕುವ ಜಾಗವನ್ನು ಅಲುಗಾಡಿಸಿದ್ದಾರೆ. ಈ ವೇಳೆ ಮೊದಲೇ ಅಳವಡಿಸಿದ್ದ ಸ್ಕಿಮ್ಮರ್ ಯಂತ್ರ ಕಳಚಿ ಬಿದ್ದಿದೆ. ಇದನ್ನು ಕಂಡು ಗಾಬರಿಗೊಂಡ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಠಾಣೆಗೆ ಸ್ಕಿಮ್ಮರ್ ಯಂತ್ರದ ಸಮೇತ ಬರಲು ಪೊಲೀಸರು ಸೂಚಿಸಿದ್ದಾರೆ. ಯಂತ್ರವನ್ನು ತೆಗೆದುಕೊಂಡು ಆ ವ್ಯಕ್ತಿ ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರ ಬಳಿ ತೆರಳಿ, ಅದನ್ನು ವಶಕ್ಕೆ ನೀಡಿದ್ದಾರೆ. ಚಂದ್ರಗುಪ್ತ ಅವರ ಆದೇಶದ ಮೇರೆಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 6ರಂದು ಇದೇ ವ್ಯಕ್ತಿ ಮಂಡ್ಯದ ಎಟಿಎಂವೊಂದರಲ್ಲಿ ಹಣ ಪಡೆದಿದ್ದರು. ಬಳಿಕ ಅವರ ಖಾತೆಯಿಂದ 5 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಹಣ ಕಡಿತವಾಗಿತ್ತು. ತಮಗಾದ ಅನ್ಯಾಯದ ಬಗ್ಗೆ ಬ್ಯಾಂಕ್ ಮತ್ತು ಸೈಬರ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಸ್ಕಿಮ್ಮಿಂಗ್ ಯಂತ್ರ ಬಳಸಿ ಹಣ ವಂಚನೆ ಮಾಡುವ ಬಗ್ಗೆ ತಿಳಿದುಕೊಂಡಿದ್ದರು. ಇದೀಗ ಮೈಸೂರಿನಲ್ಲಿ ಎಚ್ಚೆತ್ತುಕೊಂಡು ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.
ಸ್ಕಿಮ್ಮಿಂಗ್ ಯಂತ್ರದ ಬಗ್ಗೆ ಮಾಹಿತಿ:
ಎಟಿಎಂ ಯಂತ್ರಗಳಲ್ಲಿ ಕಾರ್ಡ್ ಹಾಕುವ ಜಾಗ ಹಾಗೂ ಕೀಪ್ಯಾಡ್ ನ ಮೇಲೆ ಅದನ್ನೇ ಹೋಲುವ ಸ್ಕಿಮ್ಮರ್ ಯಂತ್ರಗಳನ್ನು ವಂಚಕರು ಅಳವಡಿಸಿರುತ್ತಾರೆ. ಕಾರ್ಡ್ನಲ್ಲಿನ ದತ್ತಾಂಶ ಹಾಗೂ ಕೀಪ್ಯಾಡ್ನ ಮೇಲೆ ನಮೂದಿಸುವ ಪಾಸ್ ವರ್ಡ್ ಗಳು ಇಲ್ಲಿ ದಾಖಲಾಗುತ್ತವೆ. ನಂತರ ವಂಚಕರು ನಕಲಿ ಎಟಿಎಂ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡಿಕೊಳ್ಳುತ್ತಾರೆ.