ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ತಮ್ಮ ಮತಕ್ಷೇತ್ರಗಳಿಗೆ ಬೆಳಗ್ಗೆಯೇ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಇದರ ಜೊತೆಗೆ ಸಮಾಜದ ವಿವಿಧ ಗಣ್ಯರು, ಸ್ವಾಮೀಜಿಗಳು ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ.
ಸಂಸದ ಪ್ರತಾಪ್ ಸಿಂಹ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಡಿಎಸ್ ಅಭ್ಯರ್ಥಿ ರಾಮು, ಬಿಜೆಪಿ ಅಭ್ಯರ್ಥಿ ಮೈ.ವಿ ರವಿಶಂಕರ್ ಸೇರಿದಂತೆ ಪ್ರಮುಖರು ಮತ ಚಲಾಯಿಸಿದ್ದಾರೆ. ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ಪದವೀಧರರು ಸಂಜೆ ಐದು ಗಂಟೆಯವರೆಗೆ ಮತದಾನ ಮಾಡಲಿದ್ದಾರೆ.
ಮೈಸೂರಿನ ಕುವೆಂಪು ನಗರದ ಮತಗಟ್ಟೆ ಸಂಖ್ಯೆ 42ರಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಹೆಚ್.ಕೆ ರಾಮು ಮತದಾನ ಮಾಡಿದರು. ಮೈಸೂರಿನ ಚಾಮುಂಡಿ ಪುರಂನ ಬಾಲಬೋಧಿನಿ ಶಾಲೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತದಾನ ಮಾಡಿದರು. ಇದೇ ವೇಳೆ, ಮಾತನಾಡಿದ ಅವರು, ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು.
ದಕ್ಷಿಣ ಪದವೀಧರ ಕ್ಷೇತ್ರ ಮತದಾನ ಬಿರುಸಿನ ಸಾಗಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಒಟ್ಟು ನಾಲ್ಕು ಜಿಲ್ಲೆಯಿಂದ 1, 41 961 ಮತದಾರರಿದ್ದು, 150 ಮತಗಟ್ಟೆಗಳನ್ನು ತೆರೆಯಲಾಗಿದೆ.
ಹಾಸನದಲ್ಲಿ 24,251 ಮತದಾರರು, ಮಂಡ್ಯದಲ್ಲಿ 47,302, ಮೈಸೂರಿನಲ್ಲಿ 58,262 ಹಾಗೂ ಚಾಮರಾಜನಗರದಲ್ಲಿ 12,147 ಮತದಾರರು ಮತ ಚಲಾಯಿಸಲಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜೂ.15ರಂದು ಮೈಸೂರಿನ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಮತದಾನ ಆರಂಭ, ಧಾರವಾಡದಲ್ಲಿ ಪತ್ನಿ ಸಮೇತ ಮತಗಟ್ಟೆಗೆ ಬಂದ ಅಭ್ಯರ್ಥಿ