ಮೈಸೂರು : ವಿಧಾನ ಪರಿಷತ್ ಚುನಾವಣೆ ನಡೆಯುವ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಮತದಾರರಿಗಿಂತಲೂ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್ ಹಾಲಿ ಸದಸ್ಯ ಸಂದೇಶ್ ನಾಗರಾಜ್ ಬೆಂಬಲ ಕೋರಿ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ.
ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಜಿ.ಡಿ.ಹರೀಶ್ ಗೌಡ ಚಾಮುಂಡೇಶ್ವರಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರ ಮೇಲೆ ಹಿಡಿತ ಹೊಂದಿದ್ದಾರೆ. ಸಂದೇಶ್ ನಾಗರಾಜ್ ಸತತ ಎರಡು ಬಾರಿ ಆಯ್ಕೆಯಾಗಿ, ದ್ವಿಸದಸ್ಯ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ.
ಈ ಕಾರಣದಿಂದಾಗಿ ಇಬ್ಬರ ಮನೆಗಳಿಗೆ ಅಭ್ಯರ್ಥಿಗಳು ತೆರಳಿ ಬೆಂಬಲ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಂದೇಶ್ ನಾಗರಾಜ್ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಜಿ.ಟಿ.ದೇವೇಗೌಡ ತಮ್ಮ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.
ಬಿಜೆಪಿ ಅಭ್ಯರ್ಥಿ ಆರ್.ರಘು, ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರುಗಳು ಜಿ ಟಿ ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಫೋಟೋ ತೆಗೆಸಿಕೊಂಡು ಅವರ ಬೆಂಬಲಿಗ ಸದಸ್ಯರ ಬಳಿ ಹೋಗಿ ಮತಯಾಚಿಸುತ್ತಿದ್ದಾರೆ.
ಹಾಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮೊದಲು ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿ, ಅದು ಸಾಧ್ಯವಾಗದಿದ್ದಾಗ ಮತ್ತೆ ಜೆಡಿಎಸ್‌ನಿಂದ ಟಿಕೆಟ್ ಪಡೆಯಲು ಹೋಗಿ ಸೋತಿದ್ದರು.
ಈಗ ಮೊದಲ ಪ್ರಾಶಸ್ತ್ಯದ ಮತ ಬಿಜೆಪಿಗೆ ಹಾಗೂ ಎರಡನೇ ಪ್ರಾಶಸ್ತ್ಯದ ಮತ ಕಾಂಗ್ರೆಸ್ಗೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಸಹೋದರ ಸಂದೇಶ್ ಸ್ವಾಮಿ ಹಾಗೂ ಪುತ್ರ ಸಾತ್ವಿಕ್ ಈಗಾಗಲೇ ಬಿಜೆಪಿಯಲ್ಲಿದ್ದಾರೆ.
ಇದನ್ನೂ ಓದಿ: ನೂರಕ್ಕೆ ನೂರು ನಾವು 15 ಕ್ಷೇತ್ರ ಗೆಲ್ತೇವೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ
ಶಾಸಕ ಜಿ.ಟಿ.ದೇವೇಗೌಡ ಬೆಂಬಲ ಕೋರಿ ಬರುವವರನ್ನು ಚೆನ್ನಾಗಿ ಮಾತನಾಡಿಸಿ ಕಳುಹಿಸುತ್ತಿದ್ದು, ಬೆಂಬಲದ ಭರವಸೆ ಯಾರಿಗೂ ನೀಡಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಜೆಡಿಎಸ್‌ನಿಂದ ಜಿ.ಟಿ.ದೇವೇಗೌಡ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಂದಾಗಲೂ ಭೇಟಿ ಮಾಡಿಲ್ಲ.
ಈ ನಡುವೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಇತ್ತೀಚೆಗೆ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿ ಜೆಡಿಎಸ್ನಲ್ಲಿ ಆತಂಕ ಮನೆ ಮಾಡಿದೆ. ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮೊದಲೇ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.
ಮೂರು ಪಕ್ಷಗಳ ಅಭ್ಯರ್ಥಿಗಳು ಬೆಂಬಲ ಕೋರಿದ್ದರೂ ಇನ್ನೂ ತಮ್ಮ ನಿರ್ಧಾರ ಪ್ರಕಟಿಸದಿರುವ ಶಾಸಕ ಜಿ.ಟಿ.ದೇವೇಗೌಡ, ವಾರದ ಬಳಿಕ ಯಾರಿಗೆ ಬೆಂಬಲ ಎಂಬುದನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.