ಮೈಸೂರು : ಶಾಸಕರಾದ ಜಿ.ಟಿ. ದೇವಗೌಡರು ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ ಕೋರುತ್ತೇನೆ. ಅವರ ಪುತ್ರ ಹರೀಶ್ ಗೌಡನಿಗೆ ಚಾಮರಾಜ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ, ನಾನು ಕ್ಷೇತ್ರ ತ್ಯಾಗ ಮಾಡುತ್ತೇನೆಂದು ಶಾಸಕ ಎಲ್ ನಾಗೇಂದ್ರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜಿ.ಟಿ. ದೇವೇಗೌಡ ಹಾಗೂ ಹರೀಶ್ ಗೌಡ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಪಕ್ಷಕ್ಕೆ ಬಂದು ಈ ಭಾಗದಲ್ಲಿ ಬಿಜೆಪಿಯ 8-10 ಸ್ಥಾನ ಗೆಲ್ಲಿಸುತ್ತಾರೆ ಎನ್ನುವುದಾದರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಪಕ್ಷಕ್ಕಾಗಿ ಕ್ಷೇತ್ರ ತ್ಯಾಗಕ್ಕೂ ನಾನು ಸಿದ್ಧನಾಗುತ್ತೇನೆ ಎಂದರು.
ಇದನ್ನೂ ಓದಿ: ವಿಜಯೇಂದ್ರಗೆ ಪರಿಷತ್ ಸ್ಥಾನ ಸಾಧ್ಯತೆ: ಮಂತ್ರಿಗಿರಿಗೆ ವೇದಿಕೆ ಸಜ್ಜು?
ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಎಂದಿರುವ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಲ್.ನಾಗೇಂದ್ರ ಅವರು, ನಿಜಕ್ಕೂ ಘಟಾನುಘಟಿ ನಾಯಕರು ಬಿಜೆಪಿಗೆ ಬರಲಿದ್ದಾರೆ. ಅವರು ಯಾರು ಅಂತಾ ಉಸ್ತುವಾರಿ ಸಚಿವರನ್ನೇ ಕೇಳಿ. ನಾನು ಬೇರೆ ಪಕ್ಷದ ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ. ಒಟ್ಟಿನಲ್ಲಿ ಬಿಜೆಪಿಗೆ ಹಲವಾರು ಮಂದಿ ಸೇರ್ಪಡೆಯಾಗುವುದು ಖಚಿತ ಎಂದು ತಿಳಿಸಿದರು.