ಮೈಸೂರು: ಜಿಲ್ಲಾ ಪತ್ರಕರ್ತರ ಸಂಘಕ್ಕೆ ವಿಶೇಷ ಕಟ್ಟಡ ಹಾಗೂ ಸೌಲಭ್ಯ ಒದಗಿಸಲು ಯಾವ ರೀತಿ ಕ್ರಮ ಕೈಗೊಳ್ಳಬಹುದು? ಮುಂದಿನ ದಿನಗಳಲ್ಲಿ ಎಲ್ಲಿ ಜಾಗ ಸಿಗಬಹುದು ಎಂಬ ನಿಟ್ಟಿನಲ್ಲಿ ಮುಡಾ ಜೊತೆ ಚರ್ಚೆ ಮಾಡಿ ತೀರ್ಮಾನ ಪ್ರಕಟಿಸಲಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದ್ದಾರೆ.
![Minister ST Somashekhar statement](https://etvbharatimages.akamaized.net/etvbharat/prod-images/kn-mys-04-pressday-vis-ka10003_01072020183732_0107f_1593608852_425.jpg)
ಜಿಲ್ಲಾ ಪತ್ರಕರ್ತರ ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಾಣವಾದ ವ್ಯಾಯಾಮ ಶಾಲೆಯನ್ನ ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರಿನಲ್ಲಿ ಪತ್ರಕರ್ತರು ಗೃಹ ನಿರ್ಮಾಣ ಸಂಘದಿಂದ ಅರ್ಜಿ ಹಾಕಿದರೆ, ರಿಯಾಯ್ತಿ ದರದಲ್ಲಿ ನಿವೇಶನ ಕೊಡಿಸುವ ಬಗ್ಗೆಯೂ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಷ್ಟ ಕಾಲದಲ್ಲಿ ಮೈಸೂರಿನ ಜನತೆಗೆ ಆಹಾರ ಕಿಟ್ ನೀಡಿದ ಸುತ್ತೂರು ಶ್ರೀಗಳ ಕಾರ್ಯ ಅಪಾರ. ಅವರು ತಮ್ಮ ಶ್ರೀಮಠದಿಂದ ಎಲ್ಲ ರೀತಿಯ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದರು.
ಪತ್ರಿಕಾರಂಗದಲ್ಲಿ ಗಣನೀಯ ಕೆಲಸ ಮಾಡಿದವರನ್ನ ಗುರುತಿಸಿ ಸನ್ಮಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಸದರಾದ ಪ್ರತಾಪ್ ಸಿಂಹ ಅವರು ಬದ್ಧತೆಯುಳ್ಳ ರಾಜಕಾರಣಿ. ಅವರು ಸಹ ಪತ್ರಕರ್ತರ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಜೊತೆಗೆ ಯಾವುದೇ ಕೆಲಸ ಇರಲಿ, ಅದು ಆಗುವವರೆಗೂ ಬಿಡುವವರಲ್ಲ ಎಂದರು. ಒಂದು ಸರ್ಕಾರಕ್ಕೆ ಒಳ್ಳೆಯ ಹೆಸರನ್ನ ತರುವಂತೆ ಮಾಡಬಹುದು, ಇಲ್ಲವೇ ಸರ್ಕಾರವನ್ನು ಉರುಳುವಂತೆಯೂ ಮಾಡಬಹುದು. ಅಂತಹ ತಾಕತ್ತು ಪತ್ರಿಕೋದ್ಯಮದಲ್ಲಿದೆ. ಪತ್ರಿಕೆಗಳಲ್ಲಿ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ಬಂದರೂ ಅದಕ್ಕೆ ಸ್ಪಂದಿಸುವ ಕೆಲಸವನ್ನ ಇಲಾಖೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಂಪತ್ ಕುಮಾರ್ ಮತ್ತು ವಿಜಯಲಕ್ಷ್ಮಿ ದಂಪತಿಯನ್ನ ಸನ್ಮಾನಿಸಲಾಯಿತು.