ಮೈಸೂರು: ಸಚಿವ ರಮೇಶ್ ಜಾರಕಿಹೊಳಿ ಅವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಮೈಸೂರಿನ ಅರಮನೆಯಲ್ಲಿ ಭೇಟಿಯಾಗಿ, ಕೆಆರ್ಎಸ್ ಮುಂಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಕಳೆದ ಎರಡು ದಿನಗಳಿಂದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವರು, ಶುಕ್ರವಾರ ಸಂಜೆ ಮೈಸೂರಿನ ಅರಮನೆಗೆ ಭೇಟಿ ನೀಡಿದರು. ಈ ವೇಳೆ ಕೆಆರ್ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳ ನಿರ್ಮಾಣದ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸಚಿವರು ಪ್ರಮೋದಾದೇವಿ ಒಡೆಯರ್ಗೆ ವಿವರಿಸಿದರು.
ನೀರಾವರಿ, ಹೈನುಗಾರಿಕೆ, ಕೃಷಿ ಇಂದಿಗೂ ಕರ್ನಾಟಕದಲ್ಲಿ ಸಮೃದ್ಧಿಯಿಂದ ಇದೆ ಎಂದರೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಸಾಕಷ್ಟಿದೆ. ಬರಡಾಗಿದ್ದ ಬಯಲುಸೀಮೆಗೆ ನೀರು ಒದಗಿಸಲು ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ಅರಸರು, ತಮ್ಮ ಚಿನ್ನವನ್ನು ಮಾರಿ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿದ್ದರು. ಈ ಮೂಲಕ ಕಾವೇರಿ ನೀರು ರೈತರ ಜಮೀನಿಗೆ ಹರಿಸಿ ಕೋಟ್ಯಂತರ ಜನರ ಕಷ್ಟದ ಕಣ್ಣೀರು ಒರೆಸಿದರು ಎಂದು ಶ್ಲಾಘಿಸಿದರು.
ಹರ್ಷ ವ್ಯಕ್ತಪಡಿಸಿದ ಪ್ರಮೋದಾದೇವಿ ಒಡೆಯರ್
ರಾಜರ್ಷಿ ಒಡೆಯರ್ ಮತ್ತು ಸರ್ಎಂವಿ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿರುವ ಜಲಸಂಪನ್ಮೂಲ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್, ಸರ್ಕಾರದ ನೀರಾವರಿ ಯೋಜನೆಗಳು ಶೀಘ್ರವಾಗಿ ಮುಕ್ತಾಯಗೊಂಡು ಜನರಿಗೆ ತಲುಪುವಂತಾಗಲಿ ಎಂದು ಆಶಿಸಿದರು.