ಮೈಸೂರು: ಶರನ್ನವರಾತ್ರಿಯ ಕೊನೆಯ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಅರ್ಜುನ ಯುದ್ದಕ್ಕೆ ಹೊರಡುವ ಮುನ್ನ ಬನ್ನಿ ಪೂಜೆ ಸಲ್ಲಿಸುತ್ತಾನೆ. ಅದೇ ಸಂಪ್ರದಾಯವನ್ನ ನಾವು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ವಿಜಯದಶಮಿ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಶರನ್ನವರಾತ್ರಿಯ ಕೊನೆಯ ದಿನನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಮೊದಲನೇಯ ದಿನ ಕಂಕಣಧಾರೆಯಾಗುತ್ತದೆ. ನಂತರ ಸಿಂಹಾಸನರೋಹಣ ಆಗುತ್ತದೆ. ಆ ಬಳಿಕ 9 ದಿನಗಳ ಕಾಲ ನವಗ್ರಹ ಪೂಜೆ ನಡೆಯುತ್ತದೆ. ಪ್ರತಿದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ವಿಧಿ-ವಿಧಾನಗಳ ಮೂಲಕ ಪೂಜೆ ನಡೆಯತ್ತದೆ. ಮುಖ್ಯವಾಗಿ ತಿಥಿ ಪ್ರಕಾರ 5 ಅಥವಾ 6ನೇ ದಿನ ಸರಸ್ವತಿ ಪೂಜೆ ನಡೆಯುತ್ತದೆ. ಸಪ್ತಮಿ ದಿನ ಕಾಳಾರಾತ್ರಿ ಆಚರಿಸುತ್ತೇವೆ. ಇದು ದೊಡ್ಡ ಪೂಜೆ ಆಗಿರುತ್ತದೆ ಎಂದರು.
ಇನ್ನು, ಲಕ್ಷ್ಮೀ, ಸರಸ್ವತಿ, ಕಾಳಿ ದೇವಿಯರನ್ನು ಬೇರೆ-ಬೇರೆ ರೂಪದಲ್ಲಿ ಪೂಜೆ ಮಾಡುತ್ತೇವೆ. ನವಮಿ ದಿನ ಸಿಂಹಾಸನ ವಿಸರ್ಜನೆ ಮಾಡುತ್ತೇವೆ. ದಸರಾದ ಕೊನೆಯ ದಿನ ವಿಜಯದಶಮಿ ನಡೆಯಲಲಿದ್ದು, ಆ ದಿನವೇ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ನಮ್ಮ ವಿಜಯ ಯಾತ್ರೆ ಬನ್ನಿ ಪೂಜೆ ಬಗ್ಗೆ ಮಹಾಭಾರತ ತಿಳಿದವರಿಗೆ ಗೊತ್ತಿರುತ್ತದೆ. ಅರ್ಜುನ ಯುದ್ದಕ್ಕೆ ಹೊರಡುವ ಮುನ್ನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಹೋಗುತ್ತಾನೆ. ಅದೇ ರೀತಿ ಸಂಪ್ರದಾಯ ಮುಂದುವರೆಯುತ್ತಿದೆ ಎಂದರು.