ಮೈಸೂರು: ಇಲವಾಲ ಹೋಬಳಿಯ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಎನ್.ಆರ್.ಎಲ್.ಎಂ ಒಕ್ಕೂಟದ ಮಹಿಳಾ ಸದಸ್ಯರು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾನವ ಸರಪಳಿ ನಿರ್ಮಿಸಿ ಮತದಾನದ ಘೋಷವಾಕ್ಯಗಳನ್ನು ಕೂಗಿದರು.
ಮೈಸೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಲಿಂಗರಾಜಯ್ಯ ಅವರು ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಮತದಾನದ ಅರಿವು ಜಾಥಾಕ್ಕೆ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಇಲವಾಲ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಅಲ್ಲಿಯ ನಾಗರಿಕರಿಗೆ 2019 ರ ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿಕಡ್ಡಾಯವಾಗಿ ಮತದಾನದ ಮಾಡುವಂತೆ ತಿಳಿಸಲಾಯಿತು.
ಮತದಾರರಿಗೆ ಮತದಾನಕ್ಕೆ ಸಂಬಂಧಿಸಿದ ಕರ ಪತ್ರಗಳನ್ನು ಹಂಚಿ ಅವರಿಗೆ 'ನಿಮ್ಮ ಮತ ನಿಮ್ಮ ಹಕ್ಕು' ತಪ್ಪದೇ ಮತದಾನ ಮಾಡಿ, ನೈತಿಕ ಚುನಾವಣೆಗೆ ಬೆಂಬಲಿಸಿ ಉತ್ತಮ ಸಮಾಜ ನಿರ್ಮಾಣ ಮಾಡಲು ಮತದಾನವು ಸಿದ್ಧ ಅಸ್ತ್ರವಾಗಿದೆ ಎಂದು ಹೇಳಿದರು. ವಿವಿ ಪ್ಯಾಟ್ ಮತ್ತು ಇ.ವಿ.ಎಂಗಳ ಪ್ರಾತ್ಯಕ್ಷಿಕೆಯನ್ನು ನೀಡಿ ಅದರಲ್ಲಿ ಇಲವಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತದಾರರಿಂದ ಅಣಕು ಮತದಾನ ಮಾಡಿಸಿ ತಾವು ಯಾವ ಚಿಹ್ನೆಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಹಾಗೂ ಮತದಾನ ಮಾಡುವುದು ಮತ್ತು ಅದರ ಖಾತ್ರಿಯನ್ನು ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಲಾಯಿತು.
ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಕಾರ್ಯದರ್ಶಿ ಕೃಷ್ಣ, ತಾಲೂಕು ಪಂಚಾಯತಿ ಸಹಾಯ ನಿರ್ದೇಶಕ ಕೃಷ್ಣ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹದೇವು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ ಪಾಟೀಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ್, ಇಲವಾಲ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಪ್ರಭಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.