ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ನೀಡುವ ಗ್ರೇಡ್ನಲ್ಲಿ ಎ+' ನಿಂದ 'ಎ' ಗೆ ಇಳಿದಿದೆ. ಬೋಧಕರ ಕೊರತೆ ಹಾಗೂ ಸಂಶೋಧನೆ ಕೊರತೆಯಿಂದಾಗಿ ಈ ಕುಸಿತ ಕಂಡಿದೆ
ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪ್ರತಿಕ್ರಿಯಿಸಿ, ಅತ್ಯುತ್ತಮ ಸೌಲಭ್ಯಗಳಿರುವುದರಿಂದ ಎ+ ಶ್ರೇಯಾಂಕ ಉಳಿಸಿಕೊಳ್ಳುವ ಭರವಸೆಯಿತ್ತು. ಆದರೆ, ಬೋಧಕರ ಕೊರತೆ ಹಾಗೂ ಸಂಶೋಧನೆ ಪ್ರಮಾಣ ತಗ್ಗಿದ್ದರಿಂದ ಅಂಕಗಳು ಕಡಿಮೆಯಾಗಿವೆ. ಹೀಗಾಗಿ 'ಎ' ಮಾನ್ಯತೆ ದೊರಕಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಮಾತನಾಡಿ, 400 ಬೋಧಕರ ಕೊರತೆ ಇರುವುದರಿಂದ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳುತ್ತಿರುವುದಾಗಿ ನ್ಯಾಕ್ ಸಮಿತಿಗೆ ತಿಳಿಸಿದ್ದೆವು. ಮಾನ್ಯತೆಯು ಐದು ವರ್ಷಗಳ ಅವಧಿಗೆ ಇರಲಿದ್ದು, ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮವರ್ಕ್ ನ(ಎನ್ಐಆರ್ ಎಫ್) ಶ್ರೇಯಾಂಕ ಪಟ್ಟಿಯ ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ 19 ನೇ ಸ್ಥಾನ ಸಿಕ್ಕಿದೆ. ಈ ಮೂಲಕ ಹಿಂದಿನ ಬಾರಿಗಿಂತ 8 ಸ್ಥಾನ ಮೇಲೇರಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಾಮರಾಜನಗರ: ಆದರ್ಶ ಶಾಲೆ ಬಳಿಕ ಮೊರಾರ್ಜಿ ಶಾಲೆಯ 3 ವಿದ್ಯಾರ್ಥಿಗಳಿಗೂ ಕೋವಿಡ್..!
ಕಳೆದ ವಾರ ಭೇಟಿ ನೀಡಿದ್ದ ನ್ಯಾಕ್ ಸಮಿತಿಯ ಸದಸ್ಯರು ಮೂರು ದಿನ 30 ವಿಭಾಗಗಳು ಹಾಗೂ ಸೌಲಭ್ಯಗಳನ್ನು ಪರಿಶೀಲನೆ ಮಾಡಿ, ಬೋಧಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದರು. ಒಟ್ಟು ಸಾವಿರ ಅಂಕದಲ್ಲಿ 700 ಅಂಕ ವಿಶ್ವವಿದ್ಯಾನಿಲಯ ಸಲ್ಲಿಸಿದ ದಾಖಲೆಗಳಿಗೆ ಹಾಗೂ 300 ಅಂಕ ನ್ಯಾಕ್ ಸದಸ್ಯರು ಪರಿಶೀಲನೆ ಬಳಿಕ ನೀಡಬೇಕಾಗಿತ್ತು. ಎರಡೂ ಸೇರಿ ಶೇ.75.05 ರಷ್ಟು ಅಂಕ ಲಭಿಸಿದೆ.