ಮೈಸೂರು: ಕೋವಿಡ್ ಲಸಿಕೆ ಪ್ರಯೋಗ ಹಾಗೂ ಕೋವಿಡ್ ಶೀಲ್ಡ್ ನಡೆಸಲು ನಗರದ ಜೆಎಸ್ಎಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ಐಸಿಎಂಆರ್ ಆಯ್ಕೆ ಮಾಡಿದೆ.
ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಕೊರೊನಾ ಔಷಧ ಪ್ರಯೋಗ ನಡೆಸಲು ಜೆಎಸ್ಎಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಆಯ್ಕೆ ಮಾಡಿದೆ. ಕೊರೊನಾ ಸೋಂಕು ನಿವಾರಿಸಲು ತಯಾರಿಸಿರುವ ವ್ಯಾಕ್ಸಿನ್ ಕೆಲಸ ಮಾಡುತ್ತದೆಯೇ ಎಂದು ತಿಳಿದುಕೊಳ್ಳುವ ಪ್ರಯೋಗ ಇದಾಗಿದ್ದು, ಜೆಎಸ್ಎಸ್ ಆಸ್ಪತ್ರೆಯು ಪ್ರಯೋಗ ಮಾಡಲು ಅವಕಾಶ ಪಡೆದ ರಾಜ್ಯದ ಎರಡನೇ ಆಸ್ಪತ್ರೆಯಾಗಿದೆ.
ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಮೊದಲ ಪ್ರಕ್ರಿಯೆಗಳು ನಡೆದ ನಂತರ ಲಸಿಕೆಯನ್ನು ಇಲ್ಲಿಗೆ ಪ್ರಯೋಗಕ್ಕೆ ಕಳುಹಿಸಲಾಗುತ್ತದೆ. ಅಮೆರಿಕದ ಆಸ್ಫಾಝೆನೆಕಾ ಎಂಬ ಸಂಸ್ಥೆ ಆಕ್ಸ್‌ಫರ್ಡ್ ವಿವಿಯ ಸಹಯೋಗದಲ್ಲಿ ಲಸಿಕೆ ತಯಾರಿಕೆಯಲ್ಲಿ ತೊಡಗಿದ್ದು, ಅವರು ತಯಾರಿಸಿದ ಲಸಿಕೆಯನ್ನು ಕಡಿಮೆ ಹಾಗೂ ಮಧ್ಯಮ ಆದಾಯವುಳ್ಳ ದೇಶಗಳಿಗೆ ನೀಡಲು ನಿರ್ಧರಿಸಿದೆ.
ಐಸಿಎಂಆರ್ ಜೆಎಸ್ಎಸ್ ಆಸ್ಪತ್ರೆಯಲ್ಲಿರುವ ಸೌಲಭ್ಯ, ಸೇವೆಯ ಗುಣಮಟ್ಟ ಪರೀಕ್ಷಿಸಿದ ನಂತರ ಪ್ರಯೋಗಕ್ಕೆ ಅನುಮತಿ ನೀಡಿದ್ದು, ರೋಗಲಕ್ಷಣಗಳಿರುವ ಕೊರೊನಾ ಸೋಂಕಿತರು ಗುಣಮುಖರಾಗಲು ಬಳಸಬಹುದಾದ ಔಷಧಗಳ ಪ್ರಯೋಗ ಇಲ್ಲಿ ನಡೆಯುತ್ತದೆ ಎಂದು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್. ಬಸವಣ್ಣ ಗೌಡಪ್ಪ ತಿಳಿಸಿದ್ದಾರೆ.