ಮೈಸೂರು: ಅನಗತ್ಯ ಐಟಿಐ ಕೋರ್ಸ್ಗಳನ್ನು ಮುಚ್ಚಲಾಗುವುದು ಹಾಗೂ ಐಟಿಐ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಹೇಳಿದರು.
ಮೈಸೂರಿನ ಬೋಗಾದಿಯ ಎರಡನೇ ಹಂತದಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗೆ ಬೇಕಾಗುವಂಥ ಅಗತ್ಯ ಕೋರ್ಸ್ಗಳನ್ನು ಜಾರಿಗೊಳಿಸಿ, ಅನಗತ್ಯ ಕೋರ್ಸ್ಗಳನ್ನು ನಿಲ್ಲಿಸುತ್ತೇವೆ. ಐಟಿಐ ಕಲಿಕೆ ಜೊತೆ ಇಂಟರ್ನಶಿಪ್ ಮಾಡಿಸಲಾಗುವುದು. ನಂತರ ಕೈಗಾರಿಕೆಗಳ ಅಪ್ರೆಂಟಿಸ್ಗೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಗೆ ರಾಜ್ಯ ಸರ್ಕಾರದಿಂದ 1500ರೂ. ಶಿಷ್ಯವೇತನ ನೀಡಲಾಗುವುದು ಎಂದರು.
![industrial-learning-unnecessary-course-will-close](https://etvbharatimages.akamaized.net/etvbharat/prod-images/kn-mys-04-dcm-ashwathnarayana-vis-ka10003_25012021163720_2501f_1611572840_733.jpg)
ಐಟಿಐ ಸಂಸ್ಥೆಗಳು ಗುಣಮಟ್ಟದ್ದಾಗಿರಬೇಕು ಹಾಗೂ ಪ್ರಸ್ತುತ ವಿದ್ಯಾರ್ಥಿಗಳಿಗೆ ತಕ್ಕಂತೆ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಐಟಿಐ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಅಲೆಯದಂತೆ ಹೊಸ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ಪ್ರಗತಿ ಕಾಣುತ್ತಿದೆ. ಇದರ ಗುಣಮಟ್ಟ ಹೆಚ್ಚಿಸಲಾಗುವುದು. ಈಗ ಕೆಎಸ್ಒಯುನಲ್ಲಿ 17ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಂದಿನ ದಿನಗಳಲ್ಲಿ 1 ಲಕ್ಷ ವಿದ್ಯಾರ್ಥಿಗಳು ಓದಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ ಎಂದರು.