ಮೈಸೂರು: ಕಾಡು ಪ್ರಾಣಿಗಳ ಬೇಟೆ ಹೆಚ್ಚಳಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪರಿಸರವಾದಿ ಭಾನು ಮೋಹನ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಗಡಿಭಾಗದ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಬೇಟೆ ನಿಂತಿಲ್ಲ. ಜೊತೆಗೆ ಮೋಜು, ಮಾಂಸಕ್ಕಾಗಿ ಹುಲಿಗಳ ಚರ್ಮ, ಉಗುರು, ಆನೆ ದಂತಕ್ಕಾಗಿ ನಡೆಯುತ್ತಿರುವ ಬೇಟೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ...ರಾಮಪಟ್ಟಣ ಗ್ರಾಮಸ್ಥರಿಗೆ ಚಿರತೆ ಕಾಟ; ಸಂಜೆಯಾಗುತ್ತಲೇ ಆತಂಕ
ಬೇಟೆ ಪ್ರಮಾಣ ಅಧಿಕವಾಗಿದ್ದರೂ ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಮುಖ ಅಧಿಕಾರಿಗಳು, ರಾಜಕಾರಣಿಗಳ ಶಿಫಾರಸಿನಿಂದ ಬೇಟೆಗಾರರು ಕಾಡು ಪ್ರವೇಶಿಸುತ್ತಾರೆ. ಯಾರೇ ಸಿಕ್ಕಿ ಬಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲ್ಲ. ಏನೂ ಮಾಡದೆ ಬಿಟ್ಟು ಕಳುಹಿಸುತ್ತಾರೆ ಎಂದರು.
ಕೆಲವು ಬೇಟೆಗಾರರ ಜೊತೆ ಅರಣ್ಯಾಧಿಕಾರಿಗಳು ಕೈಜೋಡಿಸಿದ್ದಾರೆ. ಪ್ರತಿ ವರ್ಷ ಎಷ್ಟು ಬೇಟೆಗಾರರನ್ನು ಬಂಧಿಸಿದ್ದಾರೆ, ಎಷ್ಟು ಪ್ರಕರಣ ದಾಖಲಾಗಿವೆ, ಯಾವ ರೀತಿ ಶಿಕ್ಷೆ ಆಗಿದೆ ಎಂಬುದನ್ನು ಬಹಿರಂಗಪಡಿಸಲು ಅರಣ್ಯಾಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದರು.