ಮೈಸೂರು: ನಾನು ಎಷ್ಟು ಮನೆ ಕಟ್ಟಿದ್ದೇನೆ ಎಂಬುದನ್ನು ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯನವರಿಗೆ ತೋರಿಸಲು ಸಿದ್ಧ ಎಂದು ವಸತಿ ಸಚಿವ ವಿ.ಸೋಮಣ್ಣ ಸವಾಲು ಹಾಕಿದ್ದಾರೆ. ವಸತಿ ಇಲಾಖೆಯಿಂದ ಒಂದೇ ಒಂದು ಮನೆ ಆಗಿಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರವಾಗಿ, ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ವಿ.ಸೋಮಣ್ಣ ಅವರು, ವಸತಿ ಇಲಾಖೆಯಿಂದ ಕಟ್ಟಿಸಿರುವ ಮನೆ ನೋಡಲು ಸಿದ್ದರಾಮಯ್ಯರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ನಾನು ಎಷ್ಟು ಮನೆ ಕಟ್ಟಿಸಿದ್ದೇನೆ ಎಂಬುದನ್ನು ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯನವರಿಗೆ ತೋರಿಸಲು ಸಿದ್ಧ. ನಾನು ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಅವರಿಗೆ ತೋರಿಸುತ್ತೇನೆ. ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ಪದೇಪದೇ ಯಾಕೆ ಈ ಮಾತು ಹೇಳುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಬಹಳ ಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರ ಮಾತುಗಳಿಂದ ಅವರು ಎಂತಾ ಅನುಭವಸ್ಥರು ಎಂಬುದು ಗೊತ್ತಾಗುತ್ತಿದೆ. ಸಿಎಂ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾ, ಉತ್ತಮ ಆಡಳಿತ ನೀಡುತ್ತಿದೆ. ಎಲ್ಲಾ ಆರೋಪಗಳಿಗೂ ಕಾಲವೇ ಉತ್ತರ ನೀಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚುನಾವಣೆ ವರ್ಷದಲ್ಲಿ ರಾಜ್ಯದಲ್ಲೇ ಟಿಕಾಣಿ ಹೂಡಲಿದ್ದಾರೆ ಸುರ್ಜೆವಾಲಾ; ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನಕ್ಕೆ ಒತ್ತು