ಮೈಸೂರು: ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಎಸ್ಪಿ ಪಕ್ಷ ಕಾರಣ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಅಸಮಾಧಾನ ಹೊರಹಾಕಿದ್ದಾರೆ.
ಟಿನರಸೀಪುರ ಪಟ್ಟಣದಲ್ಲಿ ಟಿನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತೆ ಮತ್ತು ಅತ್ಮಾವಲೋಕನ ಸಭೆಯನ್ನು ಉದ್ದೇಶಿಸಿ ಮತನಾಡಿದರು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸೇರಿದಂತೆ ಹಲವಾರು ಸೌಲಭ್ಯ ನೀಡಿದ ಕಾಂಗ್ರೆಸ್ ಪಕ್ಷದ ಪರ ನಿಲ್ಲಬೇಕಾದ ಈ ವರ್ಗದ ಜನರು, ಅಂಬೇಡ್ಕರ್ ಫೋಟೋ ಹಾಕಿಕೊಂಡು ಮಾಯಾವತಿ ಪ್ರಧಾನಿಯಾಗುತ್ತಾರೆ ಎಂದು ಹೇಳಿಕೊಂಡು ಮತ ಕೇಳಿದವರ ಪರ ಮತ ನೀಡಿದ್ದು ಎಷ್ಟು ಸರಿ ಎನ್ನುವ ಮೂಲಕ ಬಿಎಸ್ಪಿ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿ ನಾವು ಪ್ರಚಾರ ಮಾಡುವಾಗ ಕಾಂಗ್ರೆಸ್ ಪಕ್ಷದ ಜನಪರ ಯೋಜನೆ ಹಾಗೂ ಕ್ಷೇತ್ರದ ಅಭಿವೃದ್ಧಿಯನ್ನ ಪರಿಗಣಿಸಿ ಮತ ನೀಡಿ ಎಂದು ಕೇಳುತ್ತಿದ್ದೆವು. ಆದರೆ, ಬಿಜೆಪಿಯವರು ದೇಶ, ಧರ್ಮ ಮತ್ತು ಪುಲ್ವಾಮಾ ದಾಳಿಯನ್ನು ಪ್ರಚಾರದ ದಾಳವಾಗಿ ಬಳಸಿಕೊಂಡು ಯಶಸ್ಸು ಕಂಡರು. ಇದನ್ನ ಆಳವಾಗಿ ಹೊಕ್ಕು ಚಿಂತಿಸಿದಾಗ ಧರ್ಮ ಮತ್ತು ಜಾತಿ ನಡುವೆ ಅಭಿವೃದ್ಧಿ ಮರೆಯಾಗಿತು ಎಂಬ ಸತ್ಯ ತಿಳಿಯಿತು ಎಂದು ನುಡಿದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಸೋಲು-ಗೆಲುವು ಸಹಜ. ಹಾಗೆಯೇ ನಾನು ಸಹ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ. ನನ್ನ ಮೊದಲ ಚುನಾವಣೆ ಸೋಲಿನಿಂದಲೇ ಪ್ರಾರಂಭವಾಯಿತು. ಹೀಗಾಗಿ ಸೋಲಿಗೆ ಎದೆಗುಂದುವುದಿಲ್ಲ. ನಾನು ಎರಡು ಬಾರಿ ಶಾಸಕನಾಗಿ ಎರಡು ಬಾರಿ ಸಂಸದನಾಗಿ 15 ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಯಾರಿಂದಲೂ ಭ್ರಷ್ಟಾಚಾರದ ಆರೋಪ ಮಾಡಿಸಿಕೊಂಡಿಲ್ಲ. ಹಾಗೂ ನನಗೆ ಮತ ಕೊಟ್ಟ ಮತದಾರರಿಗೆ ಕೆಟ್ಟ ಹೆಸರು ತಂದಿಲ್ಲ. ಅಧಿಕಾರ ಇದ್ದಷ್ಟು ದಿನ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಲೆ ದೇಶಾದ್ಯಂತ ಇದ್ದರೂ, ಅದನ್ನ ಮೆಟ್ಟಿ ನಿಂತು ಮತದಾರರು ನನಗೆ 5 ಲಕ್ಷದ 66 ಸಾವಿರ ಮತ ಕೊಟ್ಟರಲ್ಲ. ಅದಕ್ಕಿಂತ ತೃಪ್ತಿ ಬೇರೊಂದಿಲ್ಲ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.