ಮಂಗಳೂರು : ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಉಲ್ಭಣಿಸಿದೆ. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ರಾಜೀನಾಮೆ ಪ್ರಕಟಿಸಿದ್ದಾರೆ. ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿರುದ್ದ ಹೋರಾಟ ಮಾಡಲು ವಿದ್ಯಾರ್ಥಿ ನಾಯಕ ವಿನ್ಯಾಸ್ ಕೈಜೋಡಿಸಿಲ್ಲ. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು. ಇಂದು ಕಾಲೇಜು ವಿದ್ಯಾರ್ಥಿ ನಾಯಕ ವಿನ್ಯಾಸ್ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹಿಜಾಬ್ ಅನ್ನು ತರಗತಿಯಲ್ಲಿ ಧರಿಸುವಂತಿಲ್ಲ ಎಂದು ಪ್ರಾಂಶುಪಾಲರಲ್ಲಿ ನಾನು ಒತ್ತಡ ಹೇರುತ್ತಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಾನು ಹಿಜಾಬ್ ಪರವಾಗಿಲ್ಲ. ಪ್ರತಿಭಟನೆ ನನ್ನ ವಿರುದ್ಧವೇ ಆಗಿದ್ದ ಕಾರಣ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಇದೀಗ ನಾನು ಕಾಲೇಜು ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅವಕಾಶವಿಲ್ಲ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯ ಜಾರಿ ಮಾಡಲಾಗಿದೆ. ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಲು ಅವಕಾಶವಿಲ್ಲ ಎಂದು ಮಂಗಳೂರು ವಿ ವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ತಿಳಿಸಿದ್ದಾರೆ.
ಮೇ 16ರ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಕೋರ್ಟ್ ನಿರ್ಣಯವನ್ನು ಪಾಲಿಸುವ ಬಗ್ಗೆ ಸೂಚನೆ ಹೊರಡಿಸಲಾಗಿತ್ತು. ನಂತರ ವಿದ್ಯಾರ್ಥಿಗಳು ಆವರಣದಲ್ಲೂ ಹಿಜಾಬ್ ಹಾಕಿ ಓಡಾಡುವಂತಿಲ್ಲ ಎಂದು ಕೇಳಿಕೊಂಡಿದ್ದರು. ಈ ಬಗ್ಗೆ ವಿಭಾಗ ಮುಖ್ಯಸ್ಥರೊಂದಿಗೆ ಮಾತನಾಡಿ 25ರಂದು ರಾತ್ರಿ ಕ್ಯಾಂಪಸ್ನಲ್ಲೂ ಹಿಜಾಬ್ ಧರಿಸುವಂತಿಲ್ಲ ಎಂದು ಸಂದೇಶ ಕಳಿಸಲಾಗಿತ್ತು.
ಆದರೆ, ಲೆಟರ್ ಹೆಡ್ನಲ್ಲಿ 26ರಂದು ಬೆಳಗ್ಗೆ ಆದೇಶ ಮಾಡಲಾಯಿತು. ಈ ವೇಳೆ ಕ್ಯಾಂಪಸ್ನಲ್ಲಿ ಹಿಜಾಬ್ ಹಾಕಿಬಂದಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.
ನಾಯಕನ ವಜಾ ಸಾಧ್ಯವಿಲ್ಲ: ವಿದ್ಯಾರ್ಥಿ ನಾಯಕನ ಆಯ್ಕೆ ಚುನಾವಣೆಯ ಮುಖಾಂತರ ಮಾಡಿದ್ದರಿಂದ ವಜಾ ಮಾಡಲಾಗುವುದಿಲ್ಲ. ಇದಕ್ಕೆ ತರಗತಿಯ ನಾಯಕರಲ್ಲಿ ವಿದ್ಯಾರ್ಥಿ ನಾಯಕನ ವಜಾ ಕಾರಣ ಬರೆದು ಕೊಡುವಂತೆ ಹೇಳಿದ್ದೇನೆ ಎಂದರು.
ಶಾಂತ ಪರಿಸ್ಥಿತಿ : ಇಂದು ಆರಂಭದಿಂದ ಹಿಜಾಬ್ ತೆಗೆದು ತರಗತಿಗೆ ಬರುವ ವಿದ್ಯಾರ್ಥಿನಿಯರು ಎಂದಿನಂತೆ ಬಂದಿದ್ದು, ಹಿಜಾಬ್ ಧರಿಸಲು ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಬಂದಿಲ್ಲ. ಸದ್ಯ ಪರಿಸ್ಥಿತಿ ಶಾಂತ ರೀತಿಯಲ್ಲಿದೆ ಎಂದರು.
ಯಾರೂ ಒತ್ತಡ ಹಾಕಿಲ್ಲ: ಇನ್ನೂ ಶಾಸಕರು ನನ್ನ ಮೇಲೆ ಒತ್ತಡ ಹಾಕಿದ್ದಾರೆಂದು ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಯಾವುದೇ ಶಾಸಕರು ನನ್ನ ಮೇಲೆ ಒತ್ತಡ ಮಾಡಿಲ್ಲ. ಅಂತಹ ಶಾಸಕರು ನಮ್ಮ ಜಿಲ್ಲೆಯಲ್ಲಿ ಇಲ್ಲ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಭೆ: ವೇದವ್ಯಾಸ್ ಕಾಮತ್ ಅವರು ಈ ಕಾಲೇಜಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು. ಹೀಗಾಗಿ, ವಿದ್ಯಾರ್ಥಿಗಳು ಅವರನ್ನು ಸಭೆಗೆ ಕರೆದಿದ್ದಾರೆ. ಈ ಸಭೆಯಲ್ಲಿ ಮಂಗಳೂರು ವಿವಿ ಕುಲಪತಿ ಹಾಗೂ ಕುಲ ಸಚಿವರು ಭಾಗವಹಿಸುತ್ತಾರೆ ಎಂದು ತಳಿಸಿದರು.
ಇದನ್ನೂ ಓದಿ: ಸಿಬಿಐ ಮೇಲೆ ಆರೋಪ ಮಾಡೋರಿಗೆ ಕೋರ್ಟ್ ಮೇಲೆ ವಿಶ್ವಾಸವಿಲ್ಲ ಎಂದರ್ಥ: ಸಚಿವ ನಾರಾಯಣಸ್ವಾಮಿ