ಮೈಸೂರು : ಪ್ರತಿದಿನವೂ ನಮಗೆ ಹೂ ಮುಡಿಸಲು ಸಾಧ್ಯವಿಲ್ಲ. ಶಾಸಕ ಜಿಟಿಡಿಗೆ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ಧಾರೆ.
ಇಂದು ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವಿರೋಧವಾಗಿ ಶಾಸಕ ಜಿ ಟಿ ದೇವೇಗೌಡ ಮಾತನಾಡುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದೇನೆ. ಈ ಬಗ್ಗೆ ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ.
ಪ್ರತಿದಿನವೂ ನಮಗೆ ಹೂ ಮುಡಿಸಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಮುಗಿದ ನಂತರ ಜೆಡಿಎಸ್ ಬಳಿ ಬಂದರೆ ಅವರನ್ನ ಜೆಡಿಎಸ್ಗೆ ಮತ್ತೆ ಸೇರಿಕೊಳ್ಳುವುದಿಲ್ಲ. ಅಂದರೆ ನಾನು ಇರುವವರೆಗೂ ಮತ್ತೆ ಜೆಡಿಎಸ್ಗೆ ಸೇರಿಸಿಕೊಳ್ಳುವುದಿಲ್ಲ.
ದೇವೇಗೌಡ ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಸೂಕ್ತ ಸಮಯದಲ್ಲಿ ಕಾರ್ಯಕರ್ತರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಪಕ್ಷ ಅಲ್ಲದ ಮೇಲೆ ಪದೇಪದೆ ಜೆಡಿಎಸ್ ಬಗ್ಗೆ ಯಾಕೆ ಮಾತನಾಡುತ್ತಾರೆ.
ಮಾತನಾಡುವ ಅವಶ್ಯಕತೆಯೇ ಇಲ್ಲವಲ್ಲ. ಸಿದ್ದರಾಮಯ್ಯಗೆ ಅವರ ಪಕ್ಷಕ್ಕಿಂತ ಜೆಡಿಎಸ್ ಬಗ್ಗೆ ಮಾತನಾಡೋದೆ ಜಾಸ್ತಿ ಆಗಿದೆ. ನಮಗೆ ಐಡಿಯಾಲಾಜಿ ಇದೆ, ಅವರಿಗೆ ಐಡಿಯಾಲಾಜಿ ಕೊರತೆ ಇದೆ. ಜೆಡಿಎಸ್ನ ಶಕ್ತಿ ಏನು ಎಂದು ನಮ್ಮ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಇನ್ನು, ಸಿನಿಮಾ ಮಂದಿರಗಳಲ್ಲಿ 50ರಷ್ಟು ಜನರಿಗೆ ಮಾತ್ರ ಎಂದು ನಿಗದಿ ಮಾಡಿರುವುದು ಸರಿಯಲ್ಲ. ಎಲ್ಲಾ ಕಡೆ ಮಾಮೂಲಿ ಆಗಿರುವುದರಿಂದ ಸಿನಿಮಾ ಮಂದಿರಕ್ಕೆ ಯಾಕೆ ಈ ನಿರ್ಬಂಧ?. ಏನೋ ಮಾಮೂಲಿ ವಸೂಲಿಗೆ ಪ್ಲಾನ್ ಇರಬೇಕು ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಬಿಜೆಪಿ ಪಕ್ಷಕ್ಕೆ ಕಂಬಳಿ ಹಾಸಿದ್ದಾರೆ ಎಂಬ ಹೆಚ್ ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, ನಾನು ಬಿಜೆಪಿ ಪಕ್ಷಕ್ಕೆ ಯಾವುದೇ ರತ್ನ ಕಂಬಳಿ ಹಾಸಿಲ್ಲ. ಅದು ವಿಶ್ವನಾಥ್ ಕೆಲಸ ಎಂದರು.