ಮೈಸೂರು : ಗುಣಾಂಬ ಟ್ರಸ್ಟ್ ಆಸ್ತಿ ವಿವಾದ ವಿಚಾರವಾಗಿ ಮುಡಾ ಆಯುಕ್ತರು ನಮ್ಮೊಂದಿಗೆ ಪಾಕಿಸ್ತಾನದ ಹೆಸರು ಥಳಕು ಹಾಕಿ ಅವಮಾನಿಸಿದ್ದಾರೆಂದು ಬಾಡಿಗೆದಾರರು ಆರೋಪ ಮಾಡಿದ್ದಾರೆ.
ನಗರದ ದಿವಾನ್ ರಸ್ತೆಯಲ್ಲಿರುವ ಗುಣಾಂಬ ಟ್ರಸ್ಟ್ ಜಾಗದಲ್ಲಿ 40 ವರ್ಷಗಳಿಂದ ಬಾಡಿಗೆ ಆಧಾರದ ಮೇಲೆ ಅತಾವುಲ್ಲಾ ಖಾನ್ ಎಂಬುವರು ಗ್ಯಾರೇಜ್ ನಡೆಸುತ್ತಿದ್ದಾರೆ. ವಾರದ ಹಿಂದೆ ಟ್ರಸ್ಟ್ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಮುಡಾ ಆಯುಕ್ತ ಹೆಚ್ ಬಿ ನಟೇಶ್, ಈ ಜಾಗ ಮುಡಾಗೆ ಸೇರಿದೆಂದು ಬಾಡಿಗೆದಾರರು ಹಾಗೂ ಬಾಡಿಗೆದಾರರ ಪರ ವಕೀಲರೊಂದಿಗೆ ವಾದ ಮಾಡಿದ್ದಾರೆ.
ಈ ವೇಳೆ ಬಾಡಿಗೆದಾರರ ಪರ ವಕೀಲ ಸೈಯದ್ ಅಮೀರ್, ಗುಣಾಂಬ ಟ್ರಸ್ಟ್ ಆಸ್ತಿ ಪ್ರಕರಣದ ಬಗ್ಗೆ ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ತೀರ್ಪು ಬಂದ ಮೇಲೆ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಅಲ್ಲಿಯವರೆಗೂ ಬಾಡಿಗೆದಾರರು ಇದೇ ಜಾಗದಲ್ಲಿ ವ್ಯವಹಾರ ನಡೆಸುತ್ತಾರೆ ಎಂದರು. ಇದನ್ನೊಪ್ಪದ ಆಯುಕ್ತರು, ಇದು ಪಾಕಿಸ್ತಾನವಲ್ಲ ಅಂತ ಬಾಡಿಗೆದಾರರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅತಾವುಲ್ಲಾ ಖಾನ್, ಮಹಾರಾಜರ ಕಾಲದಲ್ಲಿ ಗುಣಾಂಬ ಟ್ರಸ್ಟ್ ಜಾಗ ಗರ್ಭಿಣಿಯರ ಆರೈಕೆ ಕೇಂದ್ರವಾಗಿತ್ತು. ಮೈಸೂರು ರಾಜವಂಶಸ್ಥರು ಮಾತ್ರ ನಮ್ಮನ್ನು ಪ್ರಶ್ನಿಸಬಹುದು. ಈ ಆಸ್ತಿ ರಕ್ಷಣೆ ಮಾಡುತ್ತಿರುವುದರಿಂದ ನಮ್ಮನ್ನು ಇರಲು ರಾಜಮನೆತನದವರೇ ಬಿಟ್ಟಿದ್ದಾರೆ.
ಮುಡಾ ಆಸ್ತಿಗೂ, ಈ ಟ್ರಸ್ಟ್ಗೂ ಸಂಬಂಧವಿಲ್ಲ. ನಾನು ಭಾರತೀಯ, ನಮ್ಮೊಂದಿಗೆ ಪಾಕಿಸ್ತಾನದ ಹೆಸರು ಥಳಕು ಹಾಕಿ ಆಯುಕ್ತರು ಅವಮಾನಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅತಾವುಲ್ಲಾ ಖಾನ್ ಸಹೋದರ ಅಬ್ದುಲ್ ಪಾಷ ಮಾತನಾಡಿ, ಮುಡಾ ಆಯುಕ್ತರು ನಿಂದನೆ ಮಾಡಿರುವುದರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಇದನ್ನೂ ಓದಿ: ಬಂಧುಗಳ ಬಲಿ ಪಡೆದ ಕೋವಿಡ್: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ