ಮೈಸೂರು: ಮತ ಚಲಾಯಿಸಲು 3 ಕಿ.ಮೀ. ನಡೆದುಕೊಂಡು ಹೋಗಬೇಕಿದೆ. ನಮ್ಮ ಊರಿನಲ್ಲೇ ಮತಗಟ್ಟೆ ಸ್ಥಾಪಿಸಿ. ಇಲ್ಲವೇ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ತಿ.ನರಸೀಪುರ ತಾಲೂಕಿನ ಹೊಸೂರು ಹುಂಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಸಮೀಪವಿರುವ ಧರ್ಮಯ್ಯನ ಹುಂಡಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಿದೆ. ಹೊಸೂರು ಹುಂಡಿಯಿಂದ ಧರ್ಮಯ್ಯನ ಹುಂಡಿಗೆ ಹೋಗಲು 3 ಕಿ.ಮೀ. ಆಗುತ್ತದೆ. ಅದಲ್ಲದೆ ಅಲ್ಲಿಗೆ ಸಾರಿಗೆ ವ್ಯವಸ್ಥೆ ಇಲ್ಲ. ನಡೆದುಕೊಂಡೇ ಹೋಗಿ ಮತ ಚಲಾಯಿಸಬೇಕಿದೆ. ವೃದ್ಧರು ಮತ್ತು ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲೂ ಚುನಾವಣೆ ಬಹಿಷ್ಕಾರ ಮಾಡಿದ್ದೆವು. ಆ ಸಂದರ್ಭದಲ್ಲಿ ಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸುವ ಬೇಡಿಕೆ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಪಂ ಚುನಾವಣೆ ಬಂದರೂ ನಮ್ಮ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ನಮ್ಮ ಗ್ರಾಮದಲ್ಲೇ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಮತದಾನದಿಂದ ದೂರವಿರುತ್ತೇವೆ ಎಂದು ಎಚ್ಚರಿಸಿದ್ದಾರೆ.