ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾಡಂಚಿನ ಗ್ರಾಮವಾದ ವರ್ತಿ ಗಿರಿಜನ ಹಾಡಿಯ ವಿದ್ಯಾರ್ಥಿಯೊಬ್ಬ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಕನಸು ಹೊಂದಿದ್ದಾನೆ. ಆದರೆ ಈತನ ಕನಸಿಗೆ ಬಡತನ ಅಡ್ಡಿಯಾಗಿದೆ.
ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟಗಳು ಆಯಾಯ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತವೆ. ಇಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಅದೇ ರೀತಿ ಪಿರಿಯಾಪಟ್ಟಣ ತಾಲೂಕಿನ ಕೋಕಿಲವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಗಿರಿಜನ ಹಾಡಿಯ ವಿದ್ಯಾರ್ಥಿ ಸಚಿನ್, ಜಿಲ್ಲಾ ಮಟ್ಟದಲ್ಲಿ ನಡೆದ ಡಿಸ್ಕಸ್ ಥ್ರೋ, 100 ಮೀ. ಓಟ ಮತ್ತು ಶಾಟ್ಪುಟ್ ಥ್ರೋನಲ್ಲಿ 3 ಚಿನ್ನದ ಪದಕಗಳನ್ನು ಪಡೆದು, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಚಿನ್ನದ ಹುಡುಗನಿಗೆ ಬೇಕಾಗಿದೆ ಸಹಾಯ ಹಸ್ತ:
ತನ್ನ ಹಾಡಿ ಹಾಗೂ ಶಾಲೆಯಲ್ಲಿ ಕಠಿಣ ಪರಿಶ್ರಮದಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದ ಈ ವಿದ್ಯಾರ್ಥಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರುವ ಕನಸಿದೆ. ಕಡು ಬಡತನಲ್ಲಿ ತಂದೆ-ತಾಯಿ ಹಾಗೂ ಅಕ್ಕನೊಂದಿಗೆ ಹಾಡಿಯಲ್ಲಿ ವಾಸವಾಗಿರುವ ಈತನಿಗೆ ಕೆಲವು ಸಂಸ್ಥೆಗಳು ಬಟ್ಟೆ ಹಾಗೂ ಶೂ ನೀಡಿವೆ. ಆದರೆ ಇವನಿಗೆ ಕ್ರೀಡಾ ಸಚಿವಾಲದಿಂದ ತರಬೇತಿ ನೀಡಿದರೆ ಸಹಕಾರಿಯಾಗಲಿದೆ ಎಂಬುದು ಎಲ್ಲರ ಆಗ್ರಹವಾಗಿದೆ.