ಮೈಸೂರು: ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಉಚಿತ ಪ್ರವೇಶ ನೀಡಲು ಸಿಂಡಿಕೇಟ್ ಸಭೆ ಮಾಡಿ ಅನುಮತಿ ಪಡೆಯಲಾಯಿತು ಎಂದು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು.
ಇಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಆನ್ಲೈನ್ನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿ, ತಂದೆ-ತಾಯಿಗಳನ್ನು ಕಳೆದುಕೊಂಡು ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಅದರಂತೆ ಮೈಸೂರು ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಾದ ಮಹಾರಾಜ, ಯುವರಾಜ, ವಿಶ್ವವಿದ್ಯಾನಿಲಯದ ಸಂಜೆ ಕಾಲೇಜು ಹಾಗೂ ಲಲಿತ ಕಲಾ ಕಾಲೇಜಿನಲ್ಲಿ ತಲಾ 5 ಸೀಟ್ಗಳನ್ನು ಹಾಗೂ ಮೈಸೂರು ವಿವಿ ವ್ಯಾಪ್ತಿಯಲ್ಲಿ ಬರುವ 4 ಸ್ನಾತಕೋತ್ತರ ಕೇಂದ್ರಗಳಾದ ಮೈಸೂರಿನ ಮಾನಸ ಗಂಗೋತ್ರಿ, ಮಂಡ್ಯ ಸರ್. ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಹಾಗೂ ಚಾಮರಾಜನಗರ ಡಾ. ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ತಲಾ 3 ಸೀಟ್ಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.