ಮೈಸೂರು: ಮಂಗಳೂರಿನಲ್ಲಿ ನಡೆದ ಗಲಾಟೆಗೆ ವಿರೋಧ ಪಕ್ಷಗಳ ಷಡ್ಯಂತ್ರವೇ ಕಾರಣ. ಈ ರೀತಿ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರನ್ನು ಭೇಟಿಯಾದ ಸಚಿವ ಸೋಮಣ್ಣ, ವಿಶ್ವನಾಥ್ ಸೋಲು ನನಗೆ ನೋವು ತಂದಿದೆ. ಇವರ ಸೋಲು ಒಂದು ದೊಡ್ಡ ಸೋಲಾಗಿದೆ. ಅವರಿಗೆ ಸ್ಥಾನಮಾನ ನೀಡುವ ಕುರಿತು ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮಂಗಳೂರು ಗಲಾಟೆ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಈಗ ಸಿಸಿಟಿವಿ ದೃಶ್ಯಗಳು ಸಾಕ್ಷಿ ಒದಗಿಸಿವೆ. ಇದು ಸಂಚಿನಿಂದ ನಡೆದ ಗಲಾಟೆ. ಬೇಕಂತಲೇ ಆಟೋಗಳಲ್ಲಿ ಕಲ್ಲು ತಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.