ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ರಾಜ್ಯಪತ್ರ ಸುಟ್ಟು ಹಾಕುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಂಟಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯು ರೈತ ವಿರೋಧಿಯಾಗಿದೆ. ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯ ಪತ್ರ ಸುಟ್ಟು ಹಾಕಿ, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕರಾಳ ಸ್ವತಂತ್ರ ದಿನಾಚರಣೆ ಆಚರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ತಾಂಡವಪುರ ಮತ್ತು ಹರಕನಹಳ್ಳಿ ಗ್ರಾಮದಲ್ಲಿ ಕೆಐಡಿಪಿನ ನೂರಾರು ಮನೆಗಳನ್ನು ಭೂಸ್ವಾಧೀನ ಮಾಡಲು ಹೊರಟಿದೆ. ಅದನ್ನು ನಿಲ್ಲಿಸಬೇಕೆಂದು ರೈತರು ಪ್ರತಿಭಟನೆ ನಡೆಸಿ ಕಾಯ್ದೆಯಲ್ಲಿ ತಂದಿರುವ ತಿದ್ದುಪಡಿಯನ್ನು ಕೂಡಲೇ ಕೈಬಿಡಬೇಕೆಂದು ಎಚ್ಚರಿಕೆ ನೀಡಿದರು.