ಮೈಸೂರು: ರೈತರ ಮನೆಗಳನ್ನು ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡೆ ಖಂಡಿಸಿ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ರೈತರು ಪತ್ರಿಭಟನೆ ನಡೆಸಿದರು.
ತಾಂಡವಪುರ ಮತ್ತು ಅಡಕನಹಳ್ಳಿ ಹುಂಡಿ ಗ್ರಾಮದಲ್ಲಿ ರೈತರು ಮನೆಗಳನ್ನು ತೆರವು ಮಾಡುವಂತೆ ಕೆಐಎಡಿಬಿ ಅಧಿಕಾರಿಗಳಿಂದ ನೋಟಿಸ್ ಜಾರಿಯಾಗಿದೆ. ಹೀಗಾಗಿ, ಎರಡೂ ಗ್ರಾಮಗಳ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮನೆಗಳಿರುವ ಜಾಗವನ್ನು ಸ್ವಾಧೀನ ಮಾಡಿಕೊಂಡರೆ ಗ್ರಾಮದ ಜನರು ಎಲ್ಲಿಗೆ ಹೋಗಬೇಕು. ಕೂಡಲೇ ಭೂಸ್ವಾಧೀನ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಮ್ಮ ಭೂಮಿ ನಮ್ಮ ಹಕ್ಕು ಎಂಬ ನಾಮಫಲಕಗಳನ್ನು ನೆಟ್ಟು ಹೋರಾಟ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಈ ಎರಡು ಗ್ರಾಮಗಳಲ್ಲಿ 2006-07ರಲ್ಲಿ ಕೆಐಎಡಿಬಿ ಭೂ ಸ್ವಾಧೀನ ಪ್ರಾರಂಭಿಸಿದೆ. ಇದರ ವಿರುದ್ಧ 14 ವರ್ಷದಿಂದ ಹೋರಾಡುತ್ತಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಸರ್ವೇ ಮಾಡಿದ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಮನೆ ಬಿಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಈ ಮೂಲಕ ಅಧಿಕಾರಿಗಳು ಅವೈಜ್ಞಾನಿಕವಾಗಿ ವರ್ತಿಸುತ್ತಿದ್ದಾರೆ. 300 ಮೀಟರ್ ಜಾಗ ಬಿಟ್ಟು ಭೂ ಸ್ವಾಧೀನ ಪ್ರಾರಂಭ ಮಾಡಿಕೊಳ್ಳಲಿ. ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಮನೆ-ಮಠ ಎಲ್ಲಾ ಕಿತ್ತುಕೊಳ್ಳುತ್ತಿದ್ದಾರೆ. ಈ ಜಾಗ ಬಿಟ್ಟು ಎಲ್ಲೂ ಹೋಗುವುದಿಲ್ಲ. ವಿಷ ಕೊಟ್ಟುಬಿಡಿ ಕುಡಿದು ಪ್ರಾಣ ಬಿಟ್ಟು ಬಿಡುತ್ತೇವೆ ಎಂದು ಅಳಲು ತೋಡಿಕೊಂಡರು ರೈತ ಶಿವಣ್ಣ.