ಮೈಸೂರು: ಗಜಪಯಣ ಮುಗಿಸಿ ವಿಶ್ರಾಂತಿಯಲ್ಲಿರುವ ಕ್ಯಾಪ್ಟನ್ ಅರ್ಜುನ ಹಾಗೂ ತಂಡದ ಆನೆಗಳು ನಾಳೆ ಅರಮನೆ ಪ್ರವೇಶಿಸಲಿವೆ.
ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆ ನಾಯಕ ಅರ್ಜುನ ಹಾಗೂ ವಿಜಯ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಆನೆಗಳಿಗೆ ಪೂಜೆ ಸಲ್ಲಿಸಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಅರಮನೆ ಮಂಡಳಿಯಿಂದ ಸ್ವಾಗತ ಕೋರಲಾಗುತ್ತದೆ.
ಇನ್ನು, ಅಶೋಕಪುರಂನಲ್ಲಿ ವಾಸ್ತವ್ಯ ಹೂಡಿರುವ ಆನೆಗಳಿಗೆ ಸ್ನಾನ ಮಾಡಿಸಿ, ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲಾ ಆನೆಗಳಿಗೂ ವಿಶೇಷ ಆಹಾರ ನೀಡಲಾಗುತ್ತಿದ್ದು, ಆನೆಗಳನ್ನು ನೋಡಲು ಬರುವ ಸ್ಥಳೀಯರಿಗೆ ಅನತಿ ದೂರದಲ್ಲಿ ನಿಂತು ವೀಕ್ಷಿಸಿ ಹೋಗುವಂತೆ ಸೂಚಿಸಲಾಗಿದೆ.
ಮಕ್ಕಳಂತೆ ಸ್ನಾನ ಮಾಡಿಸಿಕೊಂಡ ವರಲಕ್ಷ್ಮೀ:
ಮುಗ್ಧ ಮಕ್ಕಳಿಗೆ ಪೋಷಕರು ಕಾಳಜಿಯಿಂದ ಹೇಗೆ ಸ್ನಾನ ಮಾಡಿಸುತ್ತಾರೋ, ಅದೇ ರೀತಿ ಮಾವುತ ಹಾಗೂ ಕಾವಾಡಿ, ವರಲಕ್ಷ್ಮೀ ಆನೆಯನ್ನು ಮಕ್ಕಳಂತೆ ಸ್ನಾನ ಮಾಡಿಸಿದರು. ಮತ್ತು ಅರ್ಜುನ ಆನೆ ಅಕ್ಕ-ಪಕ್ಕ ಯಾವುದೇ ಆನೆಗಳನ್ನು ಕಟ್ಟದೇ ದೂರದಲ್ಲಿ ಇಡಲಾಗಿದೆ. ಜೊತೆಗೆ ಅರ್ಜುನನಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.