ಮೈಸೂರು : ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಡುವುದಿಲ್ಲ. ಅವರು ಪಕ್ಷದ ಜೊತೆ ಯಾವುದೇ ಮನಸ್ತಾಪ ಹೊಂದಿಲ್ಲ. ಅವರು ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಜಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಬ್ರಾಹಿಂ ಅವರು ಪಕ್ಷ ಬಿಡುವ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಸಿ ಎಂ ಇಬ್ರಾಹಿಂ ಮನೆಗೆ ಸದ್ಯದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಊಟಕ್ಕೆ ಹೋಗುತ್ತಾರೆ ಎಂದು ಹೇಳುವ ಮೂಲಕ ಅವರನ್ನ ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ ಎಂದು ಮಹದೇವಪ್ಪ ಹೇಳಿಕೆ ನೀಡಿದರು.
ಸಚಿವ ಈಶ್ವರಪ್ಪ ವಿರುದ್ಧ ಗರಂ : ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ರೀತಿಯ ಹೇಳಿಕೆಗಳು ರಾಷ್ಟ್ರದ್ರೋಹದಂತ ಕೃತ್ಯಗಳಾಗಿವೆ. ಈಶ್ವರಪ್ಪ ಅವರು ಹಿರಿಯ ನಾಯಕರಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ರಾಜ್ಯಪಾಲರು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಇನ್ನು ಹಿಜಾಬ್ ಸಣ್ಣ ಕಿಡಿಯಾಗಿದ್ದಾಗ ಬಗೆಹರಿಸಬಹುದಿತ್ತು. ಆದರೆ, ಅದನ್ನೇ ದೊಡ್ಡದು ಮಾಡಿ ನ್ಯಾಯಾಲಯಕ್ಕೆ ಹೋಗಿರುವುದು ಕಳ್ಳನಿಗೆ ಒಂದು ಪಿಳ್ಳೇ ನೆವ ಎಂಬ ರೀತಿಯಲ್ಲಿ ಆಗಿದೆ. ಆಡಳಿತ ಪಕ್ಷ ಉರಿಯುವ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುತ್ತಿದೆ. ಯುವಕರು ದೇಶದ ಆಸ್ತಿ. ದೇಶವನ್ನೇ ಕಟ್ಟಬೇಕಾದವರು ಇಂದು ಧರ್ಮಕ್ಕಾಗಿ ಹೋರಾಟಕ್ಕೆ ಇಳಿದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ಮಂಡ್ಯ ವಿದ್ಯಾರ್ಥಿನಿ ಮನೆಗೆ 'ಮಹಾ' ಕೈ ಶಾಸಕ ಭೇಟಿ: ಘೋಷಣೆ ಕೂಗಿದ್ದಕ್ಕೆ ಐಫೋನ್, ಸ್ಮಾರ್ಟ್‌ವಾಚ್ ಗಿಫ್ಟ್!