ಮೈಸೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಜನರ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರಿಗೆ ಇನ್ನು ಮುಂದೆ ಮೃತದೇಹವನ್ನು ಕೊಡಲಾಗುವುದು. ಆದರೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಸಿ, ಇಲ್ಲಿಯವರೆಗೆ ಮೃತ ಸೋಂಕಿತರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತವೇ ನೆರವೇರಿಸುತ್ತಿತ್ತು. ಆದರೆ ಇನ್ನು ಮುಂದೆ ಸಂಬಂಧಿಕರು ಇಚ್ಚಿಸಿದ ಜಾಗದಲ್ಲಿ ಅಥವಾ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕೊಡಲಾಗಿದೆ ಎಂದರು.
ಆದರೆ ಸಂಬಂಧಿಕರು ಮೃತದೇಹವನ್ನು ಮುಟ್ಟುವಂತಿಲ್ಲ. 20 ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಮಕ್ಕಳು, ವಯಸ್ಸಾದವರು ದೂರವಿರಬೇಕು. ಸತ್ತ ವ್ಯಕ್ತಿಯ ಧರ್ಮಕ್ಕೆ ಅನುಸಾರವಾಗಿ ಅಂತ್ಯಕ್ರಿಯೆಯನ್ನು ಅವರ ಸಂಬಂಧಿಕರು ಇಚ್ಚೆಪಟ್ಟ ಸ್ಥಳದಲ್ಲಿ ಮಾಡಲಾಗುವುದು. ಈ ಕಾರ್ಯಕ್ಕೆ ನೇಮಕಗೊಂಡಿರುವ ತಂಡವೇ ನೇರವೇರಿಸಲಿದೆ ಎಂದು ತಿಳಿಸಿದರು.
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಸಂಖ್ಯೆ ಹೆಚ್ಚಳ
ಕೋವಿಡ್ ನಿಯಂತ್ರಿಸಲು ಎನ್.ಆರ್.ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಹೀಗಾಗಿ, ಅಧಿಕ ಸೋಂಕಿತರ ಪತ್ತೆಯಾಗುತ್ತಿದ್ದಾರೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಕೊರೊನಾ ಪರೀಕ್ಷೆ ಮಾಡಿಸಲು ಜನರು ಮುಂದೆ ಬರುತ್ತಿದ್ದಾರೆ. ರಾಜ್ಯದ ಸರಾಸರಿ ನೋಡುವುದಾದರೆ, ಮೈಸೂರು ನಗರ ಪ್ರದೇಶದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಟಾಫ್ ನರ್ಸ್ ಡಿ ಗ್ರೂಪ್ ನೌಕರರ ನೇಮಕ
ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಕಳೆದ 2 ದಿನಗಳಿಂದ ಕಡಿಮೆಯಾಗಿದೆ. ಕೋವಿಡ್ ನಿರ್ವಹಣೆಗೆ ಜಿಲ್ಲೆಯಲ್ಲಿ ಸ್ಟಾಫ್ ನರ್ಸ್, ಡಿ ಗ್ರೂಪ್ ನೌಕರರ ಕೊರತೆ ಇದೆ. ಈ ಬಗ್ಗೆ ಜಾಹೀರಾತು ನೀಡಲಾಗಿತ್ತು. ಕೆಲವರು ಸಂದರ್ಶನ ನಡೆಸಿ ಕೆಲಸಕ್ಕೂ ಸೇರಿಕೊಂಡಿದ್ದರು. ಆದರೆ ಒಂದೆರಡು ದಿನ ಕೆಲಸ ಮಾಡಿ ಬಿಟ್ಟುಹೋಗುತ್ತಿದ್ದಾರೆ. ಇದು ಸಮಸ್ಯೆಯಾಗಿದ್ದು, ಹೆಚ್ಚು ಹೆಚ್ಚು ಸ್ಟಾಫ್ ನರ್ಸ್ ಡಿ ಗ್ರೂಪ್ ನೌಕರರನ್ನು ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.