ಮೈಸೂರು: ಕಪಿಲಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಪತ್ತೆಯಾಗಿದೆ. ಎರಡು ದಿನಗಳ ಕಾಲ ನಡೆದ ನಿರಂತರ ಶೋಧ ಕಾರ್ಯದಲ್ಲಿ ಮೃತದೇಹ ಕಂಡು ಬಂದಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದು ಆಕಸ್ಮಿಕ ಅಲ್ಲ, ಸಂಚು ರೂಪಿಸಿ ಕೊಲೆ ಎಂದು ಮೃತ ಯುವಕ ಅಬ್ದುಲ್ ರಹೀಮಾ ಪಾಷಾ ತಂದೆ ಮುನಾವರ್ ಪಾಷಾ ಆರೋಪ ಮಾಡಿದ್ದರು. ನಂಜನಗೂಡು ತಾಲೂಕು ಹೆಜ್ಜಿಗೆ ಗ್ರಾಮದ ಕಪಿಲಾ ನದಿಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ಈಜಲು ಹೋಗಿ ಅಬ್ದುಲ್ ರಹೀಂ ಪಾಷಾ ನಾಪತ್ತೆಯಾಗಿದ್ದರು. ಇಂದು ಮೃತದೇಹ ದೊರೆತಿದೆ.
ಇದನ್ನೂ ಓದಿ : ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು
ಆತನ ಜೊತೆಯವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು ನಾಪತ್ತೆಯಾದ ಅಬ್ದುಲ್ ತಂದೆ ಮುನಾವರ್ ಪಾಷಾ ಗಂಭೀರ ಆರೋಪ ಮಾಡಿದ್ದರು. ಅಬ್ದುಲ್ ರಹೀಮ್ ಪಾಷಾ ತೊಟ್ಟಿದ್ದ ಬಟ್ಟೆಯಲ್ಲಿಯೇ ನೀರಿಗೆ ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದರು.
ಇದೀಗ ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ. ಈಗಾಗಲೇ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಯುವಕನ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ : ಕಪಿಲಾ ನದಿಯಲ್ಲಿ ಯುವಕ ಕಣ್ಮರೆ: ಇದು ಕೊಲೆ ಎಂದ ತಂದೆ