ಮೈಸೂರು: ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಹಾಗೂ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗ ಇಡಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮೂರು ವರ್ಷಗಳಲ್ಲಿ 45 ಗಾಂಜಾ ಪ್ರಕರಣಗಳು ದಾಖಲಾಗಿದೆ. ಅಲ್ಲದೇ 'ಖಾಟ್' ಎಂಬ ವಿದೇಶಿ ಗಾಂಜಾವನ್ನು ಮೈಸೂರಿನಲ್ಲಿ 2 ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಇದನ್ನು ಬಿಟ್ಟು ಮೈಸೂರಿನಲ್ಲಿ ಯಾವುದೇ ದೊಡ್ಡಮಟ್ಟದ ಡ್ರಗ್ಸ್ ಮಾಫಿಯಾ ನಡೆದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿರುವ ರೆಸ್ಟೋರೆಂಟ್, ಬಾರ್ ಸೇರಿದಂತೆ ಇತರೆಡೆ ಪಾರ್ಟಿಗಳು ನಡೆಯಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಮೈಸೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಲಾಗಿದೆ. ಯಾರ್ಯಾರು ಖರೀದಿ ಮಾಡುತ್ತಿದ್ದರು. ಯಾವ ಸ್ಥಳದಲ್ಲಿ ಮಾರಾಟವಾಗುತ್ತಿತ್ತು ಎಂಬುದರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಅಲ್ಲದೇ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.