ಮೈಸೂರು: ಬೆಳೆಗಳ ಮೇಲೆ ಮಾಗ್ನಸೈಟ್ ಗಣಿಗಾರಿಕೆ ಧೂಳು ಬೀಳುತ್ತಿರುವುದರಿಂದ ಅನ್ನದಾತರ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಇತ್ತ ಊಟಕ್ಕೂ ಪರದಾಡುವಂತೆ ಮಾಡುತ್ತಿದೆಯಂತೆ ಈ ಗಣಿಗಾರಿಕೆಯ ಅವಾಂತರ.
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು ಗ್ರಾಮದ ಗಣಿಗಾರಿಕೆ ಪ್ರದೇಶ ಸಮೀಪ ಇರುವ ನೂರಾರು ಎಕರೆ ಪ್ರದೇಶದ ಬೆಳೆ ಗಣಿಗಾರಿಕೆಯ ಧೂಳಿನಿಂದ ಹಾಳಾಗಿದೆ. ಅಲ್ಲದೆ ನೂರಾರು ಕುಟುಂಬಗಳ ಅನ್ನದಾತರ ಬದುಕನ್ನು ಕಸಿಯತೊಡಗಿದೆ. ರೈತರಿಗೆ ನ್ಯಾಯ ಕೊಡಿಸಿ ಎಂದು ಭೂ ವಿಜ್ಞಾನ ಹಾಗೂ ಗಣಿಗಾರಿಕೆ ಇಲಾಖೆ ಕದ ತಟ್ಟಿದರೆ, ಅಧಿಕಾರಿಗಳು ನ್ಯಾಯ ಕೊಡಿಸುವ ಬದಲು ರೈತರ ಮೇಲೆ ಮುಗಿಬೀಳುತ್ತಾರೆ ಎಂದು ರೈತರು ದೂರುತ್ತಾರೆ.
ಗಣಿಗಾರಿಕೆಯ ಧೂಳಿನಿಂದ ಕೆಲವು ಕಡೆ ಜಮೀನುಗಳಲ್ಲಿ ಬೆಳೆ ಕೂಡ ಬರುತ್ತಿಲ್ಲ. ಹೀಗಾದರೆ ಕೃಷಿಯನ್ನೇ ನಂಬಿರುವ ರೈತಾಪಿ ವರ್ಗದ ಬದುಕು ಏನಾಗಬೇಡ. ಸಾಲ ಮಾಡಿ ಮನೆ, ಕುಟುಂಬಸ್ಥರ ಜೀವನ ನಿರ್ವಹಣೆ ಮಾಡಬೇಕು ಎನ್ನುವ ಆಸೆಯಿಂದ ಜಮೀನುಗಳತ್ತ ಮುಖ ಮಾಡಿದರೆ ಗಣಿಗಾರಿಕೆ ಧೂಳಿ ಅವರ ಕನಸುಗಳನ್ನು ಕಮರುತ್ತಿದೆ.
ಗಣಿಗಾರಿಕೆಯ ಧೂಳಿನಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.