ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಉತ್ತರ ಪತ್ರಿಕೆ ಸೋರಿಕೆ ಹಗರಣದಲ್ಲಿ ಮಂಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ, ಮೈಸೂರು ವಿವಿ ನೌಕರ ಮಹಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್, ವಿದ್ಯಾರ್ಥಿಗಳಾದ ಚಂದನ್, ಚೇತನ ಹಾಗೂ ಬ್ಲೂ ಡೈಮಂಡ್ ಲಾಡ್ಜ್ ಮಾಲೀಕ ಸೇರಿದಂತೆ ಆರು ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ: 2021ನೇ ಸಾಲಿನ ಏಪ್ರಿಲ್ 15 ಮತ್ತು 17ರಂದು ಕೆಮಿಸ್ಟ್ರಿ ಪರೀಕ್ಷೆ ನಡೆದಿತ್ತು. ಮೈಸೂರು ವಿವಿ ನೌಕರ ಮಹಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್ ಕೆಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಕಳ್ಳತನ ಮಾಡಿದ್ದಾರೆ. ನಂತರ ಏ.21ರಂದು ಬ್ಲೂ ಡೈಮಂಡ್ ಲಾಡ್ಜ್ನಲ್ಲಿ ಆ ಉತ್ತರ ಪತ್ರಿಕೆಗಳನ್ನು ಆಯಾ ವಿದ್ಯಾರ್ಥಿಗಳಿಗೆ ನೀಡಿ ಮತ್ತೆ ಪರೀಕ್ಷೆ ಬರೆಸುತ್ತಿದ್ದರು. ಈ ವೇಳೆ ಲಾಡ್ಜ್ ಮೇಲೆ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ ದಾಳಿ ಮಾಡಿದ್ದರು. ಆದ್ರೆ ಈ ಪ್ರಕರಣವನ್ನು ಬಯಲೆಳೆಯದೇ ಮುಚ್ಚಿ ಹಾಕಲು ಅವರಿಂದ ಲಂಚ ಪಡೆದು ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಘಟನೆ ಬಗ್ಗೆ ಜೂ. 9ರಂದು ಮೈಸೂರು ಸೋಮಸುಂದರ್ ಎಂಬುವರು ದೂರು ನೀಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ನಾರಾಯಣ ಸ್ವಾಮಿ ಸೇರಿದಂತೆ 6 ಮಂದಿ ವಿರುದ್ದ ಮಂಡಿ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಕಷ್ಟಕಾಲದಲ್ಲೂ ಜನಸಾಮಾನ್ಯರ ರಕ್ತ ಹೀರಲು ಮುಂದಾದ ಖಾಸಗಿ ಆಸ್ಪತ್ರೆಗಳು