ಮೈಸೂರು: ಕೋವಿಡ್ ಸೆಂಟರ್ಗಳಿಗೆ ಕರ್ತವ್ಯಕ್ಕೆ ನೇಮಕವಾದ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಏಕಾಏಕಿ ಖಾಸಗಿ ಕೋವಿಡ್ ಸೆಂಟರ್‌ಗಳನ್ನು ರದ್ದುಗೊಳಿಸಿದ್ದು ಏಕೆ ? ಹಾಗೂ ಉಸ್ತುವಾರಿ ಸಚಿವರ ಆದೇಶ ಪಾಲನೆ ಆಗುತ್ತಿಲ್ಲ ಎಂದು ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಹೇಳಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವಿರ್ ಸೇಠ್, ಕ್ಷೇತ್ರದ ಕೋವಿಡ್ ಸೆಂಟರ್ಗಳಿಗೆ ಸರ್ಕಾರದ ವಿವಿಧ ಆಸ್ಪತ್ರೆಗಳಿಂದ 46 ವೈದ್ಯರನ್ನು ನೇಮಕ ಮಾಡಿದ್ದು, ಇದರಲ್ಲಿ 12 ವೈದ್ಯರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಉಳಿದ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೇನೆ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಆರೋಪಿಸಿದರು.
ಮೈಸೂರು ನಗರದಲ್ಲಿ 16 ಖಾಸಗಿ ಕೋವಿಡ್ ಸೆಂಟರ್‌ಗಳನ್ನು ಮುಚ್ಚಲಾಗಿದ್ದು, 600 ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬದಲಿ ವ್ಯವಸ್ಥೆ ಮಾಡಿಲ್ಲ, ಯಾವ ಕಾರಣಕ್ಕಾಗಿ ಖಾಸಗಿ ಕೋವಿಡ್ ಸೆಂಟರ್‌ಗಳನ್ನು ರದ್ದುಗೊಳಿಸಲಾಯಿತು ಎಂಬ ಕಾರಣ ತಿಳಿಸದೇ ರದ್ದು ಮಾಡಿರುವುದು ಸರಿಯಲ್ಲ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡಿ ಆದೇಶ ಮಾಡುತ್ತಾರೆ. ಆದರೆ, ಆ ಆದೇಶ ಪಾಲನೆಯಾಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ತನ್ವಿರ್ ಸೇಠ್ ಆರೋಪಿಸಿದರು.