ಮೈಸೂರು: ಚೀನಾದಿಂದ ಜುಬಿಲಂಟ್ ಕಾರ್ಖಾನೆಗೆ ತಂದಿದ್ದ ಕಚ್ಚಾ ವಸ್ತುವಿನಿಂದ ಮೈಸೂರಿನ ನೌಕರರಿಗೆ ಕೊರೊನಾ ಸೋಂಕು ಹರಡಿಲ್ಲ ಎಂದು ಕಾರ್ಖಾನೆ ಸ್ಪಷ್ಟನೆ ನೀಡಿದೆ.

ಜುಬಿಲಂಟ್ ಲೈಫ್ ಸರ್ವೀಸಸ್ ಲಿಮಿಟೆಡ್ ಇಂದು ತನ್ನ ಮಾಧ್ಯಮ ಪ್ರಕಟಣೆಯಲ್ಲಿ, ತನ್ನ ಅಂಗ ಸಂಸ್ಥೆಯಾದ ಜುಬಿಲಂಟ್ ಜನರಿಕ್ಸ್ ಲಿಮಿಟೆಡ್ ನಂಜನಗೂಡು ಇಲ್ಲಿ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೋವಿಡ್-19ನ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಉಲ್ಲೇಖಿಸಿದೆ. ಕಚ್ಚಾವಸ್ತುವನ್ನ ಪುಣೆಯಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ.

ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಚ್ಚಾವಸ್ತು ಕುರಿತಂತೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮದಲ್ಲಿ ತಪ್ಪುಕಲ್ಪನೆ ಉಂಟಾಗಿದ್ದು ದುರದೃಷ್ಟಕರ. ಹೆಚ್ಚುವರಿಯಾಗಿ, ರೋಗಿ ಪಿ-52 ಕಳೆದ ಆರು ತಿಂಗಳುಗಳಲ್ಲಿ ಚೀನಾಗಾಗಲಿ ಅಥವಾ ಯಾವುದೇ ವಿದೇಶ ಪ್ರವಾಸವಾಗಲಿ ಕೈಗೊಂಡಿರಲಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ. ಅಲ್ಲದೇ, ಕಳೆದ ಆರು ತಿಂಗಳುಗಳಲ್ಲಿ ವಿದೇಶ ಪ್ರವಾಸ ಮಾಡಿದ್ದ ಯಾವುದೇ ಉದ್ಯೋಗಿಯಲ್ಲೂ ಪಾಸಿಟಿವ್ ಎಂದು ಪತ್ತೆಯಾಗಿಲ್ಲ. ಮೈಸೂರಿನ ನಂಜನಗೂಡಿನಲ್ಲಿ ನೆಲೆಗೊಂಡಿರುವ ಜುಬಿಲಂಟ್ ಜನರಿಕ್ಸ್ ಲಿಮಿಟೆಡ್ ತನ್ನ ಘಟಕದಲ್ಲಿ ರೋಗಿಗಳ ಜೀವ ಉಳಿಸಲು ಅಗತ್ಯವಾದ ಔಷಧಗಳಲ್ಲಿ ಬಳಸುವ ಆಕ್ಟಿವ್ ಫಾರ್ಮಾಸ್ಯೂಟಿಕಲ್ ವಸ್ತುಗಳನ್ನು ತಯಾರಿಸುತ್ತದೆ. ಇದರಲ್ಲಿ ಕೋವಿಡ್ 19 ಪಿಡುಗಿನ ವಿರುದ್ಧ ಹೋರಾಡಲು ಅಗತ್ಯವಾದ ಅಜಿತ್ರೋಮೈಸಿನ್ ಡೈಹೈಡ್ರೇಟ್ ಮತ್ತು ಅಜಿತ್ರೋಮೈಸಿನ್ ಮೋನೋಹೈಡ್ರೇಟ್ ಕೂಡಾ ಸೇರಿವೆ.
ಇದುವರೆಗೂ ಲಭ್ಯವಿರುವ ಹೆಸರಾಂತ ಜಾಗತಿಕ ಸಂಸ್ಥೆಗಳಿಂದ ಪ್ರಕಟಗೊಂಡಿರುವ ಎಲ್ಲಾ ಪುರಾವೆಗಳು ಮತ್ತು ವೈಜ್ಞಾನಿಕ ಅಂಶಗಳು, ಯಾವುದೇ ಮೇಲ್ಮೈನಲ್ಲೂ ವೈರಾಣು 72 ಗಂಟೆಗಳಿಗಿಂತಲೂ ಹೆಚ್ಚು ಕಾಲ ಜೀವಿಸಿರುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ನಂಜನಗೂಡು ಘಟಕದಿಂದ ಪಡೆದುಕೊಂಡಿದ್ದ ಮಾದರಿಯು ಸಮುದ್ರ ಮಾರ್ಗದಿಂದ ಘಟಕಕ್ಕೆ ತಲುಪಲು ಮೂರು ವಾರಗಳಿಗಿಂತ ಹೆಚ್ಚು ಕಾಲ ತೆಗೆದುಕೊಂಡಿತ್ತು ಮತ್ತು ಯಾವುದೇ ಮೈಲ್ಮೈನಲ್ಲೂ ವೈರಾಣು ಇಷ್ಟು ದೀರ್ಘಕಾಲ ಜೀವಿಸಿರುವುದಿಲ್ಲ. ರೋಗಿ ಪಿ 52 ಕಚ್ಚಾ ಮಾದರಿಗಳ ಸಂಪರ್ಕಕ್ಕೆ ಎಂದೂ ಬಂದಿರಲಿಲ್ಲ ಹಾಗೂ ಅವುಗಳನ್ನು ಪಡೆದುಕೊಳ್ಳುವುದರಲ್ಲಿ, ರವಾನೆ ಮಾಡುವುದರಲ್ಲಿ, ನಿರ್ವಹಣೆಯಲ್ಲಿ ಅಥವಾ ಸಂಗ್ರಹಮಾಡುವುದರಲ್ಲಿ ಆತನ ಪಾತ್ರವೇನೂ ಇರಲಿಲ್ಲ.
ಜುಬಿಲಂಟ್ ತನ್ನ ಘಟಕದಲ್ಲಿ ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ. ಅವರೆಲ್ಲರ ಅಗತ್ಯತೆಗಳು ಪೂರೈಕೆಯಾಗುವುದನ್ನ ಮತ್ತು ಸರ್ಕಾರದ ಶಿಷ್ಠಾಚಾರಗಳಿಂದ ನಿರ್ದೇಶಿಸಲ್ಪಟ್ಟಿರುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಅನುಸರಣೆಯಾಗುತ್ತಿರುವುದನ್ನು ಖಾತರಿ ಪಡಿಸಿಕೊಳ್ಳಲು ಅದು ನಿರಂತರವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾಧಿಕಾರಿ, ಪೊಲೀಸ್, ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ತನ್ನ ಘಟಕದ ಸುತ್ತಮುತ್ತಲಿನ ಸಮುದಾಯ ಸೇರಿದಂತೆ ಸರ್ಕಾರಿ ಪ್ರಾಧಿಕಾರಗಳ ಎಲ್ಲಾ ಹಂತಗಳಿಂದಲೂ ತಾನು ಪಡೆದುಕೊಳ್ಳುತ್ತಿರುವ ಬೆಂಬಲಕ್ಕೆ ಮನ್ನಣೆ ನೀಡುತ್ತದೆ. ಕೋವಿಡ್ 19ರಿಂದ ತಲೆ ಎತ್ತುತ್ತಿರುವ ಪರಿಸ್ಥಿತಿಯನ್ನು ಕಡಿಮೆ ಮಾಡುವುದಕ್ಕಾಗಿ ಜುಬಿಲಂಟ್ ಅವರುಗಳೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿದೆ ಮತ್ತು ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.