ಮೈಸೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳು ಬಂದ್ ಆಗಿದ್ದು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಡೆಯಬೇಕಿದ್ದ ಜಾತ್ರೆ ಸಹ ರದ್ದಾಗಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆ ಈ ಮುಂಚೆಯೇ ಎಲ್ಲಾ ದೇವಾಲಯಗಳನ್ನು ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಿದೆ. ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಾಲಯದಲ್ಲಿ ಏಪ್ರಿಲ್ 8ರಂದು ಜಾತ್ರೆ ನಡೆಯಬೇಕಿತ್ತು. ಆದರೆ, ನಂಜನಗೂಡಿನಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜಾತ್ರೆಯನ್ನು ಸಹ ರದ್ದು ಮಾಡಲಾಗಿದೆ.
ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ನಂಜನಗೂಡಿನ ದೊಡ್ಡ ಜಾತ್ರೆ ರದ್ದಾಗಿದೆ. ಶ್ರೀಕಂಠೇಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ದೇವರು ಸೇರಿದಂತೆ ಪಂಚರಥಗಳ ರಥೋತ್ಸವ ರದ್ದಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.