ಮೈಸೂರು: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಇನ್ಸ್ಪೆಕ್ಷನ್ ಟನಲ್ ನಿರ್ಮಿಸಲಾಗಿದೆ.
ಇಲ್ಲಿನ ಬಂಡಿಪಾಳ್ಯದ ಉತ್ತನಹಳ್ಳಿ ಮತ್ತು ನಂಜನಗೂಡು ರಸ್ತೆಯ ಎಪಿಎಂಸಿ ಎರಡು ಮುಖ್ಯ ದ್ವಾರಗಳಲ್ಲಿ ಟನಲ್ ನಿರ್ಮಾಣ ಮಾಡಲಾಗಿದೆ. ಮಾರುಕಟ್ಟೆ ಪ್ರವೇಶಿಸುವ ಸಾರ್ವಜನಿಕರಿಗೂ ದ್ರಾವಣ ಸಿಂಪಡಿಸಲಾಗುತ್ತಿದೆ. ಅಲ್ಲದೆ, ಎಲ್ಲರನ್ನೂ ಪೊಲೀಸರು ತಪಾಸಣೆ ಮಾಡಿಯೇ ಒಳ ಬಿಡುತ್ತಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಲಾಕ್ಡೌನ್ ಘೋಷಣೆಯಾದ ನಂತರ ತರಕಾರಿ ವಹಿವಾಟಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಕೆಲವು ರೈತರಿಂದ ತರಕಾರಿಯನ್ನ ಖರೀದಿಸಿದ ತರಕಾರಿ ದಲ್ಲಾಳಿಗಳ ಸಂಘ ಬಡವರಿಗೆ ವಿತರಿಸಲು ನಿರ್ಧರಿಸಿದೆ.
ಎಪಿಎಂಸಿಯ ಮಾರುಕಟ್ಟೆ ದಲ್ಲಾಳಿ ಸಂಘವು ಜಿಲ್ಲಾಡಳಿತಕ್ಕೆ 15 ಟನ್ ತರಕಾರಿ ನೀಡಿ ಬಡ ಜನರಿಗೆ ನೆರವಾಗಿದೆ. ಸಾರ್ವಜನಿಕರು ಅಗತ್ಯ ಸಹಕಾರ ನೀಡುವ ಮೂಲಕ ರೋಗ ಹರಡದಂತೆ ಎಚ್ಚರಿಕೆ ನೀಡಬೇಕು ಎನ್ನುತ್ತಾರೆ ಎಪಿಎಂಸಿ ಉಪಾಧ್ಯಕ್ಷ ಜವರಪ್ಪ.