ಮೈಸೂರು: ಒಕ್ಕಲಿಗರ ಪ್ರಾಬಲ್ಯವಿರುವ ಮೈಸೂರು-ಕೊಡಗು ಲೋಕಸಭಾ ಚುನಾವಣಾ ಅಖಾಡದಲ್ಲಿ ಮತದಾರರು ಕಾಂಗ್ರೆಸ್ನ ಕೈ ಹಿಡಿದು ಮುನ್ನೆಡೆಸಿದ್ದೇ ಹೆಚ್ಚು. ಈವರೆಗೂ ಬಿಜೆಪಿ ಮೂರು ಬಾರಿ ಗೆದ್ದರೆ, ಒಂದು ಬಾರಿಯೂ ಮತದಾರ ತೆನೆಯನ್ನು ಹೊರಲಿಲ್ಲ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಚಿಂತೆಯಲ್ಲಿವೆ. ಇಲ್ಲಿಯವರೆಗೆ ನಡೆದ 14 ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ 11 ಬಾರಿ ಹಾಗೂ ಬಿಜೆಪಿ 3 ಬಾರಿ ಗೆಲುವನ್ನು ಕಂಡಿದೆ. ಸಿ.ಎಚ್.ವಿಜಯಶಂಕರ್ ಎರಡು ಬಾರಿ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ಒಂದು ಬಾರಿ ಕಮಲ ಹಿಡಿದು ಎಂಪಿ ಸ್ಥಾನ ಅಲಂಕರಿಸಿದ್ದರು.
ಮೈಸೂರು ಅರಸರ ಕುಟುಂಬಸ್ಥರು ಐದು ಬಾರಿ ಲೋಕಸಭೆ ಪ್ರವೇಶಿಸಿದರೆ, ಮೈಸೂರು-ಕೊಡಗು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ 1951ರಲ್ಲಿ ಕಾಂಗ್ರೆಸ್ನ ಎನ್.ರಾಚಯ್ಯ, ಕೆಎಂಪಿಸಿ ಎಂ.ಎಸ್.ಗುರುಪಾದಸ್ವಾಮಿ ಜಯ ಗಳಿಸಿದ್ದರು. 1957ರಲ್ಲಿ ಕಾಂಗ್ರೆಸ್ನ ಎಂ.ಶಂಕರಯ್ಯ, ಎಸ್.ಎಂ.ಸಿದ್ದಯ್ಯ ಆಯ್ಕೆಯಾಗಿದ್ದರು. ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಅಖಾಡಕ್ಕಿಳಿದ್ದ ಎಂ.ಎಸ್.ಗುರುಪಾದಸ್ವಾಮಿ ಅವರಿಗೆ ಸೋಲಿನ ಅನುಭವವಾಯಿತು.
ಏಕ ಸದಸ್ಯ ಕ್ಷೇತ್ರ:
ಮೈಸೂರು-ಕೊಡಗು ಏಕ ಸದಸ್ಯ ಕ್ಷೇತ್ರವಾಗಿ ಪರಿವರ್ತನೆಯಾದ ಬಳಿಕ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂ.ಶಂಕರಯ್ಯ ಗೆದ್ದು ಎರಡನೇ ಬಾರಿ ಸಂಸತ್ ಪ್ರವೇಶಿಸಿದರು. 1967ರಿಂದ 1977ರವರೆಗೆ ಎಚ್.ಡಿ.ತುಳಸಿದಾಸಪ್ಪ ಗೆಲುವು ಕಂಡರು. ನಂತರ ನಡೆದ ಉಪ ಚುನುವಾಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ರಾಜಶೇಖಮೂರ್ತಿ ಗೆದ್ದರು. 1984ರಲ್ಲಿ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಕ್ಷೇತರ ಅಭ್ಯರ್ಥಿ ಕೆ.ಪಿ.ಶಂಕರಮೂರ್ತಿ ವಿರುದ್ಧ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದರು.
1991ರಲ್ಲಿ ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭ ಅರಸ್ಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಿದಾಗ ಮುನಿಸಿಕೊಂಡ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಬಿಜೆಪಿ ಟಿಕೆಟ್ ನೀಡಿತು. ಆದರೆ ಒಡೆಯರ್ ಮಹಿಳೆಯ ವಿರುದ್ಧ ಪರಭಾವಗೊಂಡರು. 1996ರಲ್ಲಿ ಮತ್ತೆ ಕಾಂಗ್ರೆಸ್ಗೆ ಬಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದರು. 1998ರಲ್ಲಿ ಒಡೆಯರ್ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. ಆಗ ಸಿ.ಎಚ್.ವಿಜಯಶಂಕರ್ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಗೆಲುವು ಸಾಧಿಸಿದರು. ಕಾಂಗ್ರೆಸ್ ಆಭ್ಯರ್ಥಿ ಚಿಕ್ಕಮಾದು ಮೊದಲ ಬಾರಿಗೆ ಸ್ಪರ್ಧಿಸಿ ಸೋಲುಂಡಿದ್ದರು.
1999ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ರನ್ನು ಕಣಕ್ಕಿಳಿಸಿ, ಬಿಜೆಪಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಸೋಲಿಸಲಾಯಿತು. ನಂತರ 2004ರಲ್ಲಿ ಅನಾರೋಗ್ಯದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜಕೀಯ ಸಹವಾಸವನ್ನು ಬಿಟ್ಟರು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಎಸ್.ಗುರುಸ್ವಾಮಿ ವಿರುದ್ಧ ಬಿಜೆಪಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಗೆಲುವಿನ ನಗೆ ಬೀರಿದರು. 2009ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಎಂಟ್ರಿ ಕೊಟ್ಟ ಅಡಗೂರು ಎಚ್. ವಿಶ್ವನಾಥ್ ಕಾಂಗ್ರೆಸ್ ನಗೆ ಬೀರುವಂತೆ ಮಾಡಿದರೆ, ಸಿ.ಎಚ್.ವಿಜಯಶಂಕರ್ರಿಂದ ಕಮಲ ಮುದುಡಿತು. 2014ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಕಾಂಗ್ರೆಸ್ ಅಭ್ಯರ್ಥಿ ಎ.ಎಚ್.ವಿಶ್ವನಾಥ್ ಅವರನ್ನು ಮಣಿಸಿ ಸಂಸದರಾಗಿದ್ದಾರೆ.
ಇನ್ನು 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಈ 8 ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ.