ಮೈಸೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದ್ದು, ಇದೊಂದು ಎಚ್ಚರಿಕೆ ಗಂಟೆಯಾಗಿದೆ. ರಾಜ್ಯ ನಾಯಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 5 ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಈ ಫಲಿತಾಂಶವನ್ನು ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಸೋಲಿನ ಬಗ್ಗೆ ಪರಾಮರ್ಶೆ ಅಗತ್ಯ ಎಂದರು.
ಇದರ ಜೊತೆಗೆ ಬಿಜೆಪಿ ತಂತ್ರಗಾರಿಕೆಗೆ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 1 ವರ್ಷ ಬಾಕಿ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಬಿಜೆಪಿ ಕೇವಲ ಚುನಾವಣಾ ಸಂದರ್ಭದಲ್ಲಿ ತಂತ್ರಗಾರಿಕೆ ಮಾಡುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಆಸಕ್ತಿ ಇಲ್ಲ. ಸೋಲಿನ ಜವಾಬ್ದಾರಿಯನ್ನು ಆಯಾ ರಾಜ್ಯದ ನಾಯಕರುಗಳೇ ಹೊರಬೇಕಾಗಿದೆ ಎಂದು ಹೇಳಿದರು.
ಪಂಚರಾಜ್ಯದ ಚುನಾವಣೆಯಲ್ಲಿ ಗೋವಾ, ಉತ್ತರಾಖಂಡ್ ಹಾಗೂ ಪಂಜಾಬ್ನಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ. ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಆಗಲಾರದು ಎಂದು ಧ್ರವನಾರಾಯಣ್ ಹೇಳಿದ್ರು.
ಉತ್ತರ ಪ್ರದೇಶದಲ್ಲಿ ಇವಿಎಂ ಯಂತ್ರದ ಬಗ್ಗೆ ಎದ್ದಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ಅನುಭವದಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್ಗೆ ಯಾವುದೇ ವ್ಯತ್ಯಾಸ ಕಂಡಿಲ್ಲ. ಉತ್ತರಪ್ರದೇಶದಲ್ಲಿ ಯಾವ ಆಧಾರದಲ್ಲಿ ದೂರು ನೀಡಿದ್ದಾರೋ ಗೊತ್ತಿಲ್ಲ. ಯಾವುದಕ್ಕೂ ಒಮ್ಮೆ ತನಿಖೆ ಮಾಡಿದರೆ ಒಳ್ಳೆಯದು ಎಂದರು.
ನಾಯಕತ್ವ ಬದಲಾವಣೆಯ ಅವಶ್ಯಕತೆ ಇಲ್ಲ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಅಗತ್ಯವಿಲ್ಲ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ರಾಹುಲ್ ಗಾಂಧಿ ಬೇಕಿದ್ದರೆ ಹಿಂದೆಯೇ ಉಪ ಪ್ರಧಾನಿ ಆಗಬಹುದಿತ್ತು. ಆದರೆ, ಅವರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಮುಂದಿನ ಚುನಾವಣೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲೇ ನಡೆಯಲಿದೆ. ಬಿಜೆಪಿಯವರು ವಿನಾಕಾರಣ ನಮ್ಮ ನಾಯಕರ ತೇಜೋವಧೆಯ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಆರೋಪಿಸಿದರು.
ಓದಿ: ಮೋದಿ ಆಡಳಿತದ ವರ್ಚಸ್ಸಿನ ಮುಂದೆ ಯಾವ ಪಕ್ಷವೂ ಉಳಿಯಲ್ಲ: ಡಿ.ವಿ.ಸದಾನಂದ ಗೌಡ