ಮೈಸೂರು: ಮೊದಲ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತವೂ ಸಕಲ ಸಿದ್ಧತೆಗಳನ್ನು ನಡೆಸಿದೆ.
ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಜಿಲ್ಲಾಡಳಿತವೂ ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಡಿಸೆಂಬರ್ 22ರಂದು ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಜಿಲ್ಲೆಯ ತಾಲೂಕುಗಳಾದ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಸರಗೂರು ತಾಲೂಕುಗಳ 148 ಗ್ರಾಮ ಪಂಚಾಯತಿಯಲ್ಲಿ ಮತದಾನ ನಡೆಯಲಿದ್ದು, 5 ತಾಲೂಕಿನ 949 ಕ್ಷೇತ್ರಗಳಲ್ಲಿ 2,303 ಸದಸ್ಯರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 132 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಒಟ್ಟು 2,180 ಸದಸ್ಯರ ಆಯ್ಕೆಗಾಗಿ ಮತದಾನ ನಡೆಯುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ:
974 ಮತಗಟ್ಟೆಗಳು ಸೇರಿದಂತೆ 174 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ 1,148 ಮತಗಟ್ಟೆಗಳಲ್ಲಿ ಮೊದಲನೇ ಹಂತದ ಚುನಾವಣೆಯ ಮತದಾನ ನಡೆಯಲಿದೆ. 5,052 ಅಧಿಕಾರಿ, ಸಿಬ್ಬಂದಿಯನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಸ್ಟರಿಂಗ್ ಕೇಂದ್ರದಿಂದ ಮತದಾನ ಅಧಿಕಾರಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ಹಾಗೂ ವಾಪಸ್ ಕರೆ ತರಲಿಕ್ಕಾಗಿ ಕೆಎಸ್ಆರ್ಟಿಸಿಯ 176 ಬಸ್ಗಳು, 17 ಮಿನಿ ಬಸ್, ಮ್ಯಾಕ್ಸಿ ಕ್ಯಾಬ್ ಹಾಗೂ 7 ಜೀಪ್ಗಳನ್ನು ನಿಯೋಜಿಸಲಾಗಿದೆ.
ಮತದಾರರ ವಿವರ
ಹುಣಸೂರು: ತಾಲೂಕಿನ 41 ಗ್ರಾಮ ಪಂಚಾಯತಿಗಳಲ್ಲಿ 95,056 ಪುರುಷ ಮತದಾರರು, 93,418 ಮಹಿಳಾ ಮತದಾರರು, ಇತರೆ ಮೂವರು ಮತದಾರರಿದ್ದಾರೆ.
ಕೆ.ಆರ್.ನಗರ: ತಾಲೂಕಿನ 34 ಗ್ರಾಮ ಪಂಚಾಯತಿಗಳಲ್ಲಿ 88,608 ಪುರುಷರು, 88,341ಮಹಿಳಾ ಮತದಾರರು, ಇತರೆ 12 ಮತದಾರರಿದ್ದಾರೆ.
ಹೆಚ್.ಡಿ.ಕೋಟೆ: ತಾಲೂಕಿನ 26 ಗ್ರಾಮ ಪಂಚಾಯತಿಗಳಲ್ಲಿ 65,603 ಪುರುಷರು, 64,229 ಮಹಿಳಾ ಮತದಾರರು, ಇತರೆ ಇಬ್ಬರು ಮತದಾರರಿದ್ದಾರೆ.
ಪಿರಿಯಾಪಟ್ಟಣ: ತಾಲೂಕಿನ 34 ಗ್ರಾಮ ಪಂಚಾಯತಿಗಳಲ್ಲಿ 84,263 ಪುರುಷರು, 82,240 ಮಹಿಳಾ ಮತದಾರರು, ಇತರೆ ಮೂವರು ಮತದಾರರಿದ್ದಾರೆ.
ಸರಗೂರು: ತಾಲೂಕಿನ 13 ಗ್ರಾಮ ಪಂಚಾಯತಿಗಳಲ್ಲಿ 30,482 ಪುರುಷರು, 29,758 ಮಹಿಳಾ ಮತದಾರರು, ಒಬ್ಬರು ಇತರೆ ಮತದಾರರಿದ್ದಾರೆ.
ಈ ಐದು ತಾಲೂಕಿನ 148 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 3,68,012 ಪುರುಷ ಮತದಾರರಿದ್ದರೆ, 3,57,987 ಮಹಿಳಾ ಮತದಾರರು, ಇತರೆ 21 ಮತದಾರರಿದ್ದಾರೆ. ಒಟ್ಟು 7,22,019 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ಒಪ್ಪಂದವೇ ಶ್ರೀನಿವಾಸ್ ಸೋಲಿಗೆ ಕಾರಣ : ಶಾಸಕ ಹರ್ಷವರ್ಧನ್