ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ನಿಷ್ಕ್ರಿಯರಾಗಿದ್ದಾರೆ. ಅವರು ಒಂದು ಗಂಟೆ ಕೆಲಸ ಮಾಡುತ್ತಿದ್ದು, ಅವರ ಆರೋಗ್ಯವೂ ಕ್ಷೀಣಿಸಿದೆ. ಆದಷ್ಟು ಬೇಗ ಕ್ರಿಯಾಶೀಲರು ರಾಜ್ಯದ ಜವಾಬ್ದಾರಿ ತೆಗೆದುಕೊಂಡರೆ ಒಳ್ಳೆಯದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸ್ಥಿತಿ ಈಗ ಅಯೋಮಯವಾಗಿದೆ. ಆದ್ದರಿಂದ ಕ್ರಿಯಾಶೀಲವ್ಯಕ್ತಿ ರಾಜ್ಯ ಮುನ್ನಡೆಸಬೇಕು ಎಂದರು. ಇದೇ ವೇಳೆ, ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ. ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದರು.
'ಚುನಾವಣಾ ಆಯೋಗದ ಚೆಲ್ಲಾಟ ಬೇಡ'
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪಚುನಾವಣೆಯಲ್ಲಿ ಹಲವಾರು ಶಿಕ್ಷಕರು ಮೃತಪಟ್ಟಿದ್ದಾರೆ. ಚುನಾವಣಾ ಆಯೋಗ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು, ಆರು ತಿಂಗಳು ಚುನಾವಣೆ ಮುಂದೂಡಬೇಕು ಎಂದು ಹೇಳಿದರು.