ಮೈಸೂರು : ಕೊರೊನಾದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಈ ವರ್ಷದಿಂದ ಸ್ವಲ್ಪ ಚೇತರಿಕೆ ಆಗುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ಆರ್ಥಿಕತೆ ಉತ್ತಮಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೈಸೂರು ಚಿಂತನ ಪ್ರಕಾಶನದ ವತಿಯಿಂದ ಕಲಾಮಂದಿರದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಮೈಸೂರು 'ನೂರೊಂದು ಪ್ರವಾಸಿ ತಾಣಗಳು' ಮತ್ತು ಆಂಗ್ಲ ಭಾಷೆಗೆ ಅನುವಾದಿಸಿರುವ 'ಮೈಸೂರು-ದಿ ಟೂರಿಸ್ಟ್ ಪ್ಯಾರಡೈಸ್' ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮೈಸೂರಿನ ಪ್ರವಾಸೋದ್ಯಮ ಕೊರೊನಾದಿಂದ ಸಂಕಷ್ಟ ಅನುಭವಿಸಿದೆ. ಇದಕ್ಕೆ ಸರ್ಕಾರ ಸಹಕಾರ ನೀಡಿ, ಕೋವಿಡ್ ನಡುವೆಯೂ ಮತ್ತೆ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಹಲವು ಮನವಿ ಸಲ್ಲಿಸಿದ್ದೀರಿ, ಎಲ್ಲವನ್ನು ಆದ್ಯತೆ ಮೇರೆಗೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ನಿದ್ರೆಗೆ ಜಾರಿದ ಸಿಎಂ ಯಡಿಯೂರಪ್ಪ : ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಯ ಮುಖ್ಯಸ್ಥರುಗಳು ಭಾಷಣದ ಮೂಲಕ ಮನವಿ ಮಾಡುವ ವೇಳೆ ಬಿಎಸ್ವೈ ನಿದ್ರೆಗೆ ಜಾರಿದ್ದರು. ಕಾರ್ಯಕ್ರಮದಲ್ಲಿ ಸಚಿವ ಸೋಮಶೇಖರ್, ಶಾಸಕ ನಾಗೇಂದ್ರ, ರಾಮದಾಸ್, ಜಿ ಟಿ ದೇವೇಗೌಡ, ತನ್ವಿರ್ ಸೇಠ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.