ಮೈಸೂರು: ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆ ಪದೇ ಪದೇ ಕುಸಿತವಾಗುತ್ತಿರುವುದಕ್ಕೆ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ತಂಡದ ಸದಸ್ಯರಾದ ಎಂ.ಲಕ್ಷ್ಮಣ್ ಅವರು "ಈಟಿವಿ ಭಾರತ" ಜೊತೆ ಮಾತನಾಡಿದ್ದಾರೆ.
ನಂದಿ ಬೆಟ್ಟಕ್ಕೆ ಹೋಗುವ ರಸ್ತೆಗಳು ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿವೆ. ಇವುಗಳ ನಿರ್ವಹಣೆ ಕಳಪೆಯಾಗಿದೆ. ಜೊತೆಗೆ ಭಾರಿ ವಾಹನಗಳನ್ನು ಬೆಟ್ಟದ ಮೇಲೆ ಹೋಗಲು ಬಿಡುತ್ತಿದ್ದಾರೆ. ಇವುಗಳ ಭಾರಕ್ಕೂ ರಸ್ತೆಗಳು ಕುಸಿಯುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಬೆಟ್ಟದ ಮೇಲೆ ಕಮರ್ಷಿಯಲ್ ಕಾಂಪ್ಲೆಕ್ಸ್, ಹೋಟೆಲ್, ಶೌಚಾಲಯ, ದಾಸೋಹ ಭವನ ಸೇರಿದಂತೆ ದೊಡ್ಡ ದೊಡ್ಡ ಬಿಲ್ಡಿಂಗ್ಗಳು ನಿರ್ಮಾಣವಾಗುತ್ತಿವೆ. ಇವುಗಳಿಂದ ಬರುವ ಸಿವೇಜ್ ನೀರನ್ನು ರಸ್ತೆ ಪಕ್ಕದಲ್ಲಿ ಬಿಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ತೇವಾಂಶ ಹೆಚ್ಚಾಗಿ ಮಳೆ ಬಿದ್ದಾಗ ರಸ್ತೆಗಳು ಕುಸಿದು ಬೀಳುವುದು ಸಾಮಾನ್ಯವಾಗಿದೆ ಎಂಬುದು ಅವರ ಅಭಿಮತ.
ಈ ಬಗ್ಗೆ ಪಿಡಬ್ಲ್ಯೂಡಿ, ಜಿಲ್ಲಾಡಳಿತ ಹಾಗೂ ಸ್ಥಳೀಯ ಪಂಚಾಯತ್ಗಳಿಗೆ ಎಚ್ಚರಿಕೆ ನೀಡಿದರೂ ತಡೆಗೋಡೆ ನಿರ್ಮಿಸಿಲ್ಲ. ರಿಪೇರಿ ಮಾತ್ರ ಮಾಡಲಾಗುತ್ತಿದೆ. ಇದರಿಂದ ಕುಸಿತ ತಡೆಗಟ್ಟಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಟ್ಟದ ಸುತ್ತ ಒತ್ತುವರಿ:
ಚಾಮುಂಡಿ ಬೆಟ್ಟ ಹಾಗೂ ಅದರ ಸುತ್ತಮುತ್ತಲಿನ ಅರಣ್ಯಗಳನ್ನು ನಾಶ ಮಾಡಿ, ವಿವಿಧ ಸಮುದಾಯದ ಮಠಾಧೀಶರು ಅನಧಿಕೃತವಾಗಿ ಬೆಟ್ಟದ ಜಾಗಕ್ಕೆ ತಂತಿ ಬೇಲಿ, ಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದಲೂ ಬೆಟ್ಟದ ಮೇಲಿನ ನೀರು ಸಲೀಸಾಲಗಿ ಹರಿದುಹೋಗದೇ ರಸ್ತೆಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದ್ದಾರೆ.