ಮೈಸೂರು: ಇಲ್ಲಿನ ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲರು ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೈಸೂರಿನ ಸಿದ್ಧಾರ್ಥ ನಗರದ ಬಳಿ ಇರುವ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಎಂ.ಮನೋಹರನ್ 2015 ರಿಂದ 2024 ರ ಅವಧಿಯಲ್ಲಿ 8.84 ಕೋಟಿ ರೂಪಾಯಿಗೆ ತಲುಪಿತ್ತು. ಆರೋಪಿ ಮನೋಹರನ್ ಅವರು ಆದಾಯಕ್ಕಿಂತ ಅಧಿಕವಾಗಿ 2.5 ಕೋಟಿ ರೂ. ಆಸ್ತಿ ಹೊಂದಿದ್ದು, ಅವರ ಆಸ್ತಿ ಮೌಲ್ಯವು ಶೇ.106.66 ರಷ್ಟು ಹೆಚ್ಚಾಗಿತ್ತು. ಇದರ ವಿರುದ್ಧ ಎಫ್ಐಆರ್ ದಾಖಲಾದ ನಂತರ ಸಿಬಿಐ ಅಧಿಕಾರಿಗಳು ಪ್ರಾಂಶುಪಾಲರನ್ನು ವಿಚಾರಣೆಗೆ ಒಳಪಡಿಸಿ, ಆಸ್ತಿ, ಆದಾಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗ್ತಿದೆ.
ಮೈಸೂರಿನಲ್ಲಿ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಯಾವುದೇ ಮಾಹಿತಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಇಲ್ಲ. ಆದರೆ, ವಾಹನಗಳನ್ನು ಕೋರಿರುವುದರಿಂದ ಸಿಬಿಐ ಅಧಿಕಾರಿಗಳಿಗೆ ವಾಹನಗಳನ್ನು ಒದಗಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಓದಿ: 'ಹತ್ಯೆಯಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ'