ಮೈಸೂರು: ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟುವುದು ಸ್ವಲ್ಪ ವಿಳಂಬವಾದರೆ ಸಾಕು, ಇಲಾಖೆ ಸಿಬ್ಬಂದಿ ಹಣ ಕಟ್ಟುವಂತೆ ಒತ್ತಡ ಹಾಕುತ್ತಾರೆ. ಕಟ್ಟಲಿಲ್ಲ ಅಂದ್ರೆ ವಿದ್ಯುತ್ ಸಂಪರ್ಕವನ್ನೇ ಸ್ಥಗಿತ ಮಾಡುತ್ತಾರೆ. ಆದರೆ, ಇದೇ ತಪ್ಪನ್ನ ಸರ್ಕಾರಿ ಇಲಾಖೆಗಳು ಮಾಡಿದರೆ ನೋಟಿಸ್ ನೀಡಿ ಸಮ್ಮನಾಗುತ್ತಾರೆ. ಇದೇ ರೀತಿ ನಂಜನಗೂಡು ವಿಭಾಗದ ಕಾವೇರಿ ನೀರಾವರಿ ನಿಗಮ ನಿಯಮಿತ 2 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿಯೇ ಇಲ್ಲ. ನೀರಾವರಿ ಇಲಾಖೆಯ ವಿದ್ಯುತ್ ಬಿಲ್ ಬಾಕಿ ಮೊತ್ತ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.
ನಂಜನಗೂಡಿನ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿ ಬರೋಬ್ಬರಿ 19 ಕೋಟಿಗೂ ಅಧಿಕ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ಸೆಪ್ಟೆಂಬರ್ನಿಂದಲೂ ಚೆಸ್ಕಾಂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ನೋಟಿಸ್ ನೀಡಲಾಗುತ್ತಿದ್ದರೂ, ಬಿಲ್ ಮಾತ್ರ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ಡಿಸೆಂಬರ್ ಮಾಹೆಯವರೆಗೆ ಬಿಲ್ ಮೊತ್ತ 19,34,36,716 ರೂ. ಆಗಿದೆ. ಈಗಾಗಲೇ ವಿದ್ಯುತ್ ಕಡಿತಗೊಳಿಸುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ಡಿಸೆಂಬರ್ 10 ರಂದು ವಿದ್ಯುತ್ ನಿಲುಗಡೆ ಮಾಡುವುದಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟುಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಹಣ ವಸೂಲಿ ಮಾಡುವ ಚೆಸ್ಕಾಂ ಅಧಿಕಾರಿಗಳು, ನೀರಾವರಿ ಇಲಾಖೆಗೆ ಬಾಕಿ ಪಾವತಿಸಲು ಗಡುವು ನೀಡುತ್ತಿರುವ ಉದ್ದೇಶವಾದರೂ ಏನು ಎಂಬುದು ಮಾತ್ರ ತಿಳಿಯುತ್ತಿಲ್ಲ.
ನೀರಾವರಿ ಇಲಾಖೆಗೆ ಕಾಲ ಕಾಲಕ್ಕೆ ತಕ್ಕಂತೆ ಅನುದಾನ ಬಿಡುಗಡೆಯಾಗುತ್ತಿದೆ. ಇದರಲ್ಲಿ ವಿದ್ಯುತ್ ವೆಚ್ಚವೂ ಸೇರಿರುತ್ತದೆ. ಹೀಗಿದ್ದಾಗ ಈ ಹಣ ಎಲ್ಲಿಗೆ ಹೋಗಿದೆ? ಸಾರ್ವಜನಿಕರಿಗೆ ಒಂದು ಕಾನೂನು ಸರ್ಕಾರಿ ಇಲಾಖೆಗೆ ಒಂದು ಕಾನೂನಾ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಬಾಸ್ ಬಾಸ್ ಸಿದ್ದು ಬಾಸ್, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಡಿಕೆಶಿ ಮುಂದೆ ಘೋಷಣೆ!!