ಮೈಸೂರು : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ರೀತಿ ಸಂಚಾರಕ್ಕೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಎಸ್ ಸವದಿ ಭರವಸೆ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾನು ಹಾಗೂ ಶಿಕ್ಷಣ ಸಚಿವರು ಸಭೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಶಾಸಕರ ಅಮಾನತು ಪ್ರಜಾಪ್ರಭುತ್ವದಲ್ಲಿ ದುರಂತದ ಸಂಗತಿ : ಮಹಾರಾಷ್ಟ್ರದಲ್ಲಿ 12 ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ದುರಂತ. ನಮ್ಮ ರಾಜ್ಯದಲ್ಲಿ ಒಬ್ಬ ಕಾಂಗ್ರೆಸ್ ಶಾಸಕನನ್ನು ಅಮಾನತು ಮಾಡಿದಾಗ, ವಿರೋಧ ಪಕ್ಷದವರು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಕೂಗಾಡಿದರು. ಆದರೆ, ಮಹಾರಾಷ್ಟ್ರದಲ್ಲಿ ಅಮಾನತು ಮಾಡಿದ್ದು ಸರಿಯೇ? ಇದು ದ್ವಂದ್ವ ನಿಲುವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲೆಕ್ಟ್ರಿಕ್ ಬಸ್ ಪ್ರಯೋಗ : ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಮಾಡಲು ಚಿಂತನೆ ಮಾಡಲಾಗಿದೆ. ಪ್ರಾಯೋಗಿಕವಾಗಿ 300 ಎಲೆಕ್ಟ್ರಿಕ್ ಬಸ್ ಖರೀದಿಸಿ ಸಂಚಾರ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 50 ಲಕ್ಷ ರೂ. ಸಬ್ಸಿಡಿ ಹಣ ಟೆಂಡರ್‌ದಾರರಿಗೆ ನೀಡಲಿದೆ ಎಂದರು. ಅಲ್ಲದೆ, ಸಾರಿಗೆ ಹೊರೆ ಕಡಿಮೆ ಮಾಡಿಕೊಳ್ಳಲು ಪಾರ್ಸಲ್ ಹಾಗೂ ಕೊರಿಯರ್ ವ್ಯವಸ್ಥೆ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.