ಮೈಸೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡುವ ಹೇಳಿಕೆ ನೂರನೇ ನಾಟಕವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ 99 ನಾಟಕಗಳು ಮುಗಿದಿವೆ, ಇದು ನೂರನೇ ನಾಟಕ. ಯಡಿಯೂರಪ್ಪ ಬಿಟ್ಟರೆ ಬಿಜೆಪಿಗೆ ಯಾರು ಇಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದ ರಾಜೀನಾಮೆ ನಾಟಕವಾಡಿದ್ದಾರೆ. ಯಡಿಯೂರಪ್ಪನವರು ಮಾಯಾವಿ, ದೊಡ್ಡ ಆಲೋಚನೆ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ ಎಂದು ಕುಟುಕಿದರು.
ಸಂಸತ್ತು, ಸಚಿವರು, ಹಾಗೂ ಶಾಸಕರು ಕೆಲಸಕ್ಕೆ ಬಾರದವರು. ಇದನ್ನು ಸದುಪಯೋಗಪಡಿಸಿಕೊಂಡು, ಗಾಢವಾದ ಲೆಕ್ಕಚಾರದಲ್ಲಿ ಹೇಳಿದ್ದಾರೆ. ಯಡಿಯೂರಪ್ಪ ಮಹಾದ್ವೇಷಿ, ಅದ್ಭುತ ಕೆಲಸ ಮಾಡುವ ವ್ಯಕ್ತಿ. ಏಳಿಗೆ ಸಹಿಸುವುದಿಲ್ಲ. ಹೈಕಮಾಂಡ್ ಗೆ ಎಚ್ಚರಿಕೆ ನೀಡಲು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪನವರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷ ಹೊರತುಪಡಿಸಿ, ಹೊಸ ಪಕ್ಷ ಬರಬೇಕು ಎಂದ ಅವರು, ಕೇಂದ್ರ ಸರ್ಕಾರ ದಿನನಿತ್ಯ ಪೆಟ್ರೋಲ್ -ಡೀಸೆಲ್ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ, ಜನರನ್ನ ಮರೆತಿದೆ. ಇದೊಂದು ಕೆಟ್ಟ ಸರ್ಕಾರ, ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.