ಹೆಚ್‌ಡಿಕೋಟೆ(ಮೈಸೂರು): ಬಡತನದ ಸಂಕಷ್ಟದಿಂದ ನೊಂದ ದಲಿತ ಕುಟುಂಬದ ಅಣ್ಣ-ತಮ್ಮಂದಿರು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಹೆಚ್‌ಡಿಕೋಟೆ ತಾಲೂಕಿನ ಕಟ್ಟೆಮನಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು (22) ಹಾಗೂ ನಾಗರಾಜು (20) ಆತ್ಮಹತ್ಯೆ ಮಾಡಿಕೊಂಡಿರುವ ಸಹೋದರರು. ಇವರು ಕಡು ಬಡತನ ಹೊಂದಿದ್ದ ಸಿದ್ದರಾಜು ಮತ್ತು ರತ್ನಮ್ಮ ದಂಪತಿಯ ಇಬ್ಬರು ಮಕ್ಕಳು. ಸಿದ್ದರಾಜು ಕೂಲಿ ಕಾರ್ಮಿಕನಾಗಿದ್ದರೆ, ನಾಗರಾಜು ಪದವಿ ವಿದ್ಯಾಭ್ಯಾಸ ಮಾಡಿದ್ದ.
ಇವರಿಗೆ ಜಮೀನು ಹಾಗೂ ಸ್ವಂತ ಮನೆ ಇಲ್ಲದೆ ಕುಟುಂಬ ಸಮೇತವಾಗಿ ಕೆಲಸ ಸಿಕ್ಕಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೂ ಬಡತನದ ಬೇಗೆಯಿಂದ ಆಚೆ ಬರಲು ಇವರ ಕೈಯಲ್ಲಿ ಸಾಧ್ಯವಾಗಿರಲಿಲ್ಲ.
ನಾಗರಾಜು ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡಿದರೂ ಕೆಲಸ ಸಿಕ್ಕಿರಲಿಲ್ಲ. ಶುಕ್ರವಾರ ಅಣ್ಣ-ತಮ್ಮಂದಿರು ತಂದೆ-ತಾಯಿಗಳು ಪಡುತ್ತಿರುವ ಕಷ್ಟವನ್ನು ಕಂಡು, ಮಧ್ಯಾಹ್ನ ಊಟ ಮಾಡಿ ಕುಟುಂಬದ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು ಎನ್ನಲಾಗ್ತಿದೆ.
ಮನೆಯಲ್ಲಿ ಅಣ್ಣ ಸಿದ್ದರಾಜು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ, ತಮ್ಮ ನಾಗರಾಜು ಮನೆಯಿಂದ ಸ್ವಲ್ಪ ದೂರ ಸಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜು ಒದ್ದಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದರು ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಗ್ರಾಮಸ್ಥರು ಹಾಗೂ ಕುಟುಂಬದವರು ಸೇರಿ ಒಂದೇ ಕಡೆ ಸಹೋದರರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.