ಮೈಸೂರು: ಬಿಜೆಪಿ ಪಕ್ಷಕ್ಕೂ ಅದರ ನಾಯಕರಿಗೂ ಸಂಸ್ಕೃತಿಯ ಅರಿವೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ದೇಶದ ತುಂಬೆಲ್ಲಾ ಸುಳ್ಳನ್ನೇ ಪ್ರಚಾರ ಮಾಡುತ್ತಾರೆ. ಸುಳ್ಳನ್ನು ಸತ್ಯವೆಂದು, ಸತ್ಯವನ್ನು ಸುಳ್ಳೆಂದು ಪ್ರತಿಪಾದನೆ ಮಾಡುವ ಫ್ಯಾಸಿಸ್ಟ್ ಪಕ್ಷ ಬಿಜೆಪಿ. ಅದರ ನಾಯಕರಿಗೂ ಪಕ್ಷಕ್ಕೂ ಒಳ್ಳೆಯ ಸಂಸ್ಕೃತಿ ಇಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರಿಗೆ ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಮೈಸೂರಿನ ಹಲ್ಲೆ ಪ್ರಕರಣಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ. ಮೈಸೂರಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾದ ಸಂದರ್ಭದಲ್ಲಿ ಅವರ ತಂದೆ-ತಾಯಿಯರು ಬಂದು ಮಕ್ಕಳಿಗೆ ಪರೀಕ್ಷೆ ಇದೆ. ಅವರ ಭವಿಷ್ಯ ಹಾಳಾಗುತ್ತದೆ ಎಂದು ಕೇಳಿಕೊಂಡರು. ಹಾಗಾಗಿ ಅವರ ಮೇಲಿದ್ದ ಕೇಸ್ಗಳನ್ನು ವಾಪಸ್ ಪಡೆಯಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಇನ್ನು ಶ್ರೀರಾಮುಲು ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಪವರ್ಫುಲ್ ಹಾಗೂ ಪಾಪ್ಯುಲರ್ ಲೀಡರ್. ಅವರ ವಿರುದ್ಧ ನಾನು ತೊಡೆ ತಟ್ಟಲು ಸಾಧ್ಯವೇ? ಎಂದು ವ್ಯಂಗ್ಯವಾಡಿದರು. ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಕರ್ನಾಟಕದಲ್ಲೂ ಈ ಅನರ್ಹರಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದರು.
ರಾಜ್ಯದಲ್ಲಿ ಪ್ರವಾಹದಿಂದ ಜನ ಕಣ್ಣೀರಿಡುತ್ತಿದ್ದಾರೆ. ಇದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದು ಈ ಉಪ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ. ಬಿಜೆಪಿ 8 ಸ್ಥಾನವನ್ನು ಸಹ ಗೆಲ್ಲುವುದಿಲ್ಲ ಎಂದರು.