ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಬಿಜೆಪಿ ಗೆಲ್ಲಲು ಅನುಕೂಲ ಮಾಡಿಕೊಡಲು ಹೊಂದಾಣಿಕೆ ಆಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸಿಂಗಲ್ ಡಿಜಿಟ್ ಸಂಖ್ಯೆ ಗೆಲ್ಲಬಹುದು ಅಷ್ಟೇ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಅವರು, ಜೆಡಿಎಸ್‌ನವರು ಪರಿಷತ್ ಚುನಾವಣೆಗೆ ಕೇವಲ 7 ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಏನಾದರೂ ಬಿಜೆಪಿ ಜೊತೆ ಕೈ ಜೋಡಿಸಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರಾ ಅಥವಾ ಬಿಜೆಪಿಯವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಿರಬಹುದು ಎಂಬುದು ನನ್ನ ಅಭಿಪ್ರಾಯ. ಉಪಚುನಾವಣೆ ನಡೆದ ಸಿಂಧಗಿ ಮತ್ತು ಹಾನಗ್‌ನಲ್ಲಿ ಬಿಜೆಪಿಯವರಿಗೆ ಸಹಾಯ ಮಾಡಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದರು ಎಂದು ಜನತಾದಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭಾಷಣಕ್ಕೆ ಬೆಂಬಲಿಗರು ಅಡ್ಡಿಪಡಿಸಿಲ್ಲ:
MLA Zameer Ahmed Khan: ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸಾಯೋವರೆಗೂ ಸಂಬಂಧ ಕೆಡುವುದಿಲ್ಲ. ಬೆಂಗಳೂರಿನ ಕಾರ್ಯಕ್ರಮದಲ್ಲಿ ನಮ್ಮ ಬೆಂಬಲಿಗರು ಭಾಷಣಕ್ಕೆ ಅಡ್ಡಿ ಮಾಡಿಲ್ಲ. ಪುನೀತ್ ರಾಜ್‍ಕುಮಾರ್ ಗೀತ ನಮನ ಕಾರ್ಯಕ್ರಮಕ್ಕಾಗಿ ಸಿದ್ದರಾಮಯ್ಯ ಅವರು ಭಾಷಣ ಮೊಟಕುಗೊಳಿಸಿ ಅಲ್ಲಿಂದ ಹೋಗಿದ್ದಾರೆ. ಆ ಘಟನೆ ನಂತರ ದೂರವಾಣಿಯಲ್ಲಿ ನಾನು ಮಾತನಾಡಿದ್ದೇನೆ. ಸಿದ್ದರಾಮಯ್ಯ ಸಂತೋಷವಾಗಿದ್ದಾರೆ ಎಂದು ಜಮೀರ್ ಸ್ಪಷ್ಟಪಡಿಸಿದ್ರು.
ಪರಿಷತ್ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಇದು ಕಾಂಗ್ರೆಸ್‌ನ ಭದ್ರಕೋಟೆ, ಜೆಡಿಎಸ್‌ನ ಭದ್ರಕೋಟೆಯಲ್ಲ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಜೆಡಿಎಸ್ ಸೋತಮೇಲೆ ಭದ್ರ ಕೋಟೆ ಎಲ್ಲಿಂದ ಬಂತು ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಮಳೆಯ ಅವಾಂತರದಲ್ಲಿ ನಗರದ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಸಿಎಂ ನೆಪ ಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಪರಿಹಾರ ನೀಡುತ್ತಿಲ್ಲ. ನೆಪ ಮಾತ್ರಕ್ಕೆ ವೀಕ್ಷಣೆ ಮಾಡಿದರೆ, ಏನೂ ಪ್ರಯೋಜನವಿಲ್ಲ ಎಂದು ಸರ್ಕಾರದ ವಿರುದ್ಧ ಜಮೀರ್ ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯದ ರಾಜಕಾರಣಿಗಳಲ್ಲೇ ಅತ್ಯಂತ ಶ್ರೀಮಂತ ಯೂಸುಫ್ ಷರೀಫ್(ಕೆಜಿಎಫ್ ಬಾಬು)..