ಮೈಸೂರು: ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಬಿಡಾಡಿ ದನಗಳನ್ನು ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡಲು ಬಿಡುವುದರಿಂದ, ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿರುವ ಕಸದ ತೊಟ್ಟಿಯಲ್ಲಿನ ಆಹಾರವನ್ನು ಸೇವಿಸುತ್ತವೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ನಗರದ ನೈರ್ಮಲ್ಯ ಹಾಗೂ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದ್ದು ವಾಹನ ಸವಾರರು ಮತ್ತು ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿವೆ.
ಇನ್ನು ಈ ಕುರಿತಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಬಿಡಾಡಿ ದನಗಳನ್ನು ಹಿಡಿದು ದೊಡ್ಡಿಯಲ್ಲಿ ಕೂಡಿ ಹಾಕಿ ಮೊದಲ ಬಾರಿಗೆ ದಿನಕ್ಕೆ ರೂ.500/- ದಂಡ ವಿಧಿಸಲಾಗುತ್ತಿದೆ. ಹಾಗೂ ಎರಡನೇ ಬಾರಿ ಅದೇ ಮಾಲೀಕರ ದನಗಳು ಸೆರೆಸಿಕ್ಕಲ್ಲಿ ಜಾನುವಾರುಗಳನ್ನು ಹಿಂತಿರುಗಿಸಲಾಗುತ್ತಿಲ್ಲ. ಬದಲಾಗಿ ಪಿಂಜರಪೋಲ್ ಸಂಸ್ಥೆಗೆ ಬಿಡಲಾಗುತ್ತದೆ. ಅಲ್ಲದೇ 2 ಪಾಳಿಯಲ್ಲಿ ಬಿಡಾಡಿ ದನಗಳನ್ನು ಹಿಡಿಯುವ ತಂಡ ರಚಿಸಲಾಗುತ್ತಿದ್ದು, ಈ ವಿಷಯದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ತಮ್ಮ ರಾಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡಲು ಬಿಡದೆ, ಮನೆಯಲ್ಲಿ ಕಟ್ಟಿ ಹಾಕಿಕೊಂಡು ಸಾಕಾಣಿಕೆ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.