ಮೈಸೂರು: ನನ್ನ ಪತಿ ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಚಾಚುತ್ತಿದ್ದರು, ಆದರೆ ಆ ಸಹಾಯ ಮಾಡಿದ್ದನ್ನ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಹಿರಿಯ ನಟಿ ಭಾರತಿ, ತಮ್ಮ ಪತಿ ಡಾ. ವಿಷ್ಣುವರ್ಧನ್ ಅವರನ್ನು ನೆನಪು ಮಾಡಿಕೊಂಡರು.
ಮೈಸೂರಿನ ನಾದಬ್ರಹ್ಮ ಸಂಗೀತಸಭಾದಲ್ಲಿ ನಡೆದ ಜಯಚಾಮರಾಜೇಂದ್ರ ಒಡೆಯರ್ರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಮಹಾರಾಜರು ಹಾಗೂ ನನ್ನ ಪತಿ ವಿಷ್ಣುವರ್ಧನ್ ಹಲವಾರು ಒಳ್ಳೆಯ ಕೆಲಸ ಮಾಡಿದರೂ ಎಂದಿಗೂ ಹೇಳಿಕೊಳ್ಳಲಿಲ್ಲ, ಮಾನವೀಯತೆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರಿಬ್ಬರೂ ಎಲ್ಲರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಭಾರತಿ ಹೇಳಿದರು.
ನಾನು ಹಾಗೂ ನನ್ನ ತಂಗಿ ಮೈಸೂರು ದಸರಾ ನೋಡಲು ತಂದೆಯೊಂದಿಗೆ ಬಂದು ಅವರ ಹೆಗಲ ಮೇಲೆ ಕುಳಿತು ನೋಡುತ್ತಿದ್ದ ಕ್ಷಣಗಳು ಇನ್ನೂ ಹಸಿರಾಗಿದ್ದು, ಮೈಸೂರಿನ ಸೊಸೆಯಾಗಿದ್ದು ನನ್ನ ಪುಣ್ಯ ಎಂದು ಹೆಮ್ಮೆಯಿಂದ ಭಾರತಿ ಹೇಳಿದ್ದಾರೆ.