ಮೈಸೂರು: ಬಸವರಾಜ ಬೊಮ್ಮಾಯಿ ಆಯ್ಕೆಯಾದ ಸಿಎಂ ಅಲ್ಲ, ನೇಮಕವಾದ ಸಿಎಂ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಹ ನೇಮಕವಾದ ಸಿಎಂ, ಇವರಿಗೆ ಜನ ಬಹುಮತ ಕೊಟ್ಟಿರಲಿಲ್ಲ. ಹಣ ಬಳಸಿ ಚುನಾವಣೆ ಮಾಡಿ ಅಧಿಕಾರಕ್ಕೆ ಬಂದರು. ಇವರು ಯಾವ ರೀತಿ ಬಂದರು ಅನ್ನೋದು ಗೊತ್ತಿದೆ ಎಂದರು.
ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮ ವಿಚಾರವಾಗಿ ಮಾತನಾಡಿ, ಇದರಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರವು ಭಾಗಿಯಾಗಿದೆ. ಹಿರಿಯ ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ನಡೆದುಕೊಂಡಿರುವ ರೀತಿ ನೋಡಿದರೆ, ರಾಜಕಾರಣಿಗಳೇ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಅಕ್ರಮ ನಡೆದಿದೆ ಎಂದು ಅವರ ಪಕ್ಷದವರೇ ಹೇಳಿದ್ದರು. ಆಗ ಅಕ್ರಮ ನಡೆದಿಲ್ಲ ಎಂದು ಅವರೇ ಹೇಳಿದ್ದರು. ಬೇಜವಾಬ್ದಾರಿತನದಿಂದ ಸದನಕ್ಕೆ ಸುಳ್ಳು ಹೇಳಿದ್ದಾರೆ. ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಆರಗ ಜ್ಞಾನೇಂದ್ರ ಒಂದು ಕ್ಷಣವೂ ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ಕಡೆಯವರು ಇಬ್ಬರಿದ್ದಾರೆ. ಒಬ್ಬ ದರ್ಶನ್ ಗೌಡ, ಇನ್ನೊಬ್ಬ ನಾಗೇಶ್ ಗೌಡ. ಅವರಿಬ್ಬರು ಅಶ್ವತ್ಥ್ ನಾರಾಯಣ್ ಸಂಬಂಧಿಕರು. ಇವರಿಗೆ ಅಂಕಗಳನ್ನು ಜಾಸ್ತಿ ಕೊಡಲಾಗಿದೆ. ಅವರನ್ನು ವಿಚಾರಣೆಗೆ ಕರೆದು ಬಳಿಕ ಬಿಟ್ಟು ಕಳಿಸಿದ್ದಾರೆ. ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು. ಕೇಂದ್ರದ ನಾಯಕರು ಇವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರ ಭ್ರಷ್ಟಾಚಾರದ ಪರ ಮುದ್ರೆ ಒತ್ತುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಕೊಡುವ ಅಧಿಕಾರ ಇವರಿಗಿಲ್ಲ. ಅವರೇನು ಸಾಕ್ಷಿದಾರರಾ, ಅಪರಾಧಿನಾ? ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆಯಾ? ನಿಮ್ಮ ಬಳಿ ಸಾಕ್ಷಿಗಳು ಏನಿವೆ ಎಂದು ಬಂದು ಕೇಳಲಿ. ಅದರ ಬದಲು ಅವರು ನೋಟಿಸ್ ಕೊಟ್ಟ ತಕ್ಷಣ ಹೋಗುವುದಕ್ಕಾಗುತ್ತಾ? ಇದು ರಾಜಕೀಯ, ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಹರಿಹಾಯ್ದರು.
ಈ ಪಿಎಸ್‌ಐ ಪರೀಕ್ಷಾ ಹಗರಣವನ್ನು ಪಕ್ಕಕ್ಕೆ ಸರಿಸಲು ಈ ರೀತಿ ರಾಜ್ಯದಲ್ಲಿ ಅಜಾನ್ ವಿಚಾರವನ್ನು ಎಳೆದು ತರಲಾಗುತ್ತಿದೆ. ಇವರ ಬಳಿ ಹೇಳಿಕೊಳ್ಳಲು ಇವರು ಮಾಡಿರುವ ಸಾಧನೆಗಳು ಯಾವುದೂ ಇಲ್ಲ. ಹಾಗಾಗಿ ಚುನಾವಣೆಯಲ್ಲಿ ಗೆಲ್ಲಲು ಕೋಮುವಾದಿ ವಿಚಾರವನ್ನೇ ಇಟ್ಟುಕೊಂಡು ಹೋಗಬೇಕು. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಸುಮಾರು 300 ಕೋಟಿ ಹಣ ಪಡೆಯಲಾಗಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿವರೆಗೂ ವಸೂಲಿ ಮಾಡಲಾಗಿದೆ. ದರ್ಶನ್ ಗೌಡ ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ ಪಡೆದು, ಎರಡನೇ ಪತ್ರಿಕೆಯಲ್ಲಿ ಹೆಚ್ಚು ಅಂಕ ಗಳಿಸಿದ್ದಾನೆ. ಆತ ಕಿವಿಗೆ ಬ್ಲೂ ಟೂಥ್ ಹಾಕಿಕೊಂಡು ಬರೆದಿದ್ದಾನೆ. ಖಾಲಿ ಪೇಪರ್ ಕೊಟ್ಟು ಆಮೇಲೆ ಬರೆಸಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಇದು ಮಾತ್ರವಲ್ಲ, ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಹೇಳಿದರು.
ಇದಕ್ಕೆಲ್ಲಾ ಯಾರು ಜವಾಬ್ದಾರರು? ಅದಕ್ಕೆ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರಗೆ ಬರಬೇಕಾದರೆ, ಕಳ್ಳರಿಗೆ ಶಿಕ್ಷೆಯಾಗಬೇಕಾದರೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್ ಹಿಟ್ ಆ್ಯಂಡ್ ರನ್ ಮಾಡ್ತಿದೆ ಎಂದ ಸಿಎಂ